ADVERTISEMENT

ಬಿಹಾರ ಸಿಎಂ ಬೆಂಗಾವಲು ಪಡೆಯ ಮೇಲೆ ಕಲ್ಲು, ಬಡಿಗೆಗಳಿಂದ ದಾಳಿ ಮಾಡಿದ್ದವರು ಬಂಧನ

ಪಿಟಿಐ
Published 22 ಆಗಸ್ಟ್ 2022, 9:39 IST
Last Updated 22 ಆಗಸ್ಟ್ 2022, 9:39 IST
ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ದಾಳಿ ಮಾಡಿದ ಸಂದರ್ಭ
ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ದಾಳಿ ಮಾಡಿದ ಸಂದರ್ಭ   

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ದಾಳಿ ಮಾಡಿದ್ದ 13 ದುಷ್ಕರ್ಮಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಭಾನುವಾರ ಸಂಜೆ ಪಟ್ನಾ ಜಿಲ್ಲೆಯ ಗೌರಿಚೌಕ್ ಪೊಲೀಸ್ ಠಾಣೆಯ ವ್ಯಾಪ್ತಿಯ ಸೊಗಾಹಿ ಹಳ್ಳಿಯಲ್ಲಿ ದುಷ್ಕರ್ಮಿಗಳು ಮುಖ್ಯಮಂತ್ರಿಗಳ ಬೆಂಗಾವಲು ಪಡೆ ವಾಹನದ ಮೇಲೆ ಮನಸೋಇಚ್ಚೆ ಕಲ್ಲು ತೂರಾಟ ನಡೆಸಿ, ಬಡಿಗೆಗಳಿಂದ ಕಾರುಗಳನ್ನು ಪುಡಿ ಪುಡಿ ಮಾಡಿದ್ದರು. ಈ ವೇಳೆ ಬೆಂಗಾವಲು ಪಡೆಯ ಜೊತೆ ಸಿಎಂ ನಿತೀಶ್ ಕುಮಾರ್ ಇರಲಿಲ್ಲ.

ಘಟನೆಗೆ ಸಂಬಂಧಿಸಿದಂತೆ ಇನ್ನೂ 23 ಜನರನ್ನು ‍ಗುರುತಿಸಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಯಾದಲ್ಲಿ ಪಿತೃಪಕ್ಷ ಆಚರಣೆಯ ಸಲುವಾಗಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಸಿಎಂ ನಿತೀಶ್ ಕುಮಾರ್ ಭಾಗವಹಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರು ಹೆಲಿಕಾಪ್ಟರ್ ಮೂಲಕ ಗಯಾ ತಲುಪಿದ್ದರು. ಈ ವೇಳೆ ಸೊಗಾಹಿ ಬಳಿ ಬೆಂಗಾವಲು ಪಡೆಯ ಮೇಲೆ ಉದ್ರಿಕ್ತರು ದಾಳಿ ಮಾಡಿದ್ದರು.

ಪಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಅವರು 24 ಗಂಟೆಯಲ್ಲಿ ಈ ಘಟನೆ ಬಗ್ಗೆ ಸೂಕ್ತ ವರದಿ ನೀಡಬೇಕು ಎಂದು ಡಿಎಸ್‌ಪಿಗೆ ತಾಕೀತು ಮಾಡಿದ್ದಾರೆ.

ಆಗಸ್ಟ್ 7 ರಂದು ಸೊಗಾಹಿಯಿಂದ ಕಾಣೆಯಾಗಿದ್ದ ಯುವಕನೊಬ್ಬನ ಮೃತದೇಹ ಗಾಯ್‌ಘಾಟ್ ಬಳಿಯ ಗಂಗಾ ನದಿಯಲ್ಲಿ ಭಾನುವಾರ ಪತ್ತೆಯಾಗಿತ್ತು. ಈ ಹತ್ಯೆಯನ್ನು ಖಂಡಿಸಿ ಜಿಲ್ಲಾಡಳಿತದ ವಿರುದ್ಧ ಸೊಗಾಹಿ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದರು. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಸಿಎಂ ಬೆಂಗಾವಲು ಪಡೆಯ ಮೇಲೆ ಉದ್ರಿಕ್ತರುದಾಳಿ ಮಾಡಿದ್ದರು.

ಮುಖ್ಯಮಂತ್ರಿಯವರ ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಲೋಪವಾದರೂಗೌರಿಚೌಕ್ ಠಾಣೆಯ ಠಾಣಾಧಿಕಾರಿ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ವಿಡಿಯೊಗಳು ವೈರಲ್ ಆದ ಮೇಲೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.