ಮೇಧಾ ಪಾಟ್ಕರ್
ಹೈದರಾಬಾದ್: ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿದ್ದ ಮೇಧಾ ಪಾಟ್ಕರ್ ಅವರಿಗೆ ವಾಪಸ್ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಭೇಟಿಯ ಬಗ್ಗೆ ಪೂರ್ವ ಮಾಹಿತಿ ನೀಡದ ಕಾರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂಮೆಂಟ್ಸ್ (ಎನ್‌ಎಪಿಎಂ)ನ 30ನೇ ವಾರ್ಷಿಕೋತ್ಸವದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಹೈದರಾಬಾದ್‌ನಲ್ಲಿರುವ ಪಾಟ್ಕರ್ ಅವರು, ಮೂಸಿ ನದಿಯ ಬಳಿಯ ಚಾದರ್‌ಘಾಟ್ ಪ್ರದೇಶದಲ್ಲಿರುವ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ್ದರು.
ಪಾಟ್ಕರ್ ಅವರು ಈ ಪ್ರದೇಶಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿದ್ದಾರೆ. ಅದು ಯೋಜಿತ ಪ್ರತಿಭಟನೆಯ ಭಾಗವಲ್ಲ ಎಂದು ಎನ್‌ಎಪಿಎಂನ ಕಿರಣ್ ಕುಮಾರ್ ವಿಸ್ಸಾ ಹೇಳಿದ್ದಾರೆ.
ಅವರು ಆ ಪ್ರದೇಶದಲ್ಲಿ ವಾಸಿಸುವ ಕೆಲವು ಸ್ವಯಂಸೇವಕರನ್ನು ಮತ್ತು ಮೂಸಿ ಯೋಜನೆಯಿಂದ ಸಂತ್ರಸ್ತರಾದ ಜನರನ್ನು ಭೇಟಿ ಮಾಡಲು ಹೋಗಿದ್ದರು. ಅಲ್ಲಿನ ಕೆಲವು ನಿವಾಸಿಗಳೊಂದಿಗೆ ಸಂವಹನ ನಡೆಸಿ ಹೊರಟರು ಎಂದಿದ್ದಾರೆ.
ಸೋಮವಾರ ಪೊಲೀಸ್ ತಂಡವೊಂದು ಕಾರ್ಯಕರ್ತರ ಮನೆಗೆ ಹೋಗಿ ಭೇಟಿಯ ಉದ್ದೇಶದ ಬಗ್ಗೆ ಪಾಟ್ಕರ್ ಅವರನ್ನು ಪ್ರಶ್ನಿಸಿದಾಗ, ಅವರು ತಮ್ಮ ಸ್ನೇಹಿತರನ್ನು ಭೇಟಿಯಾಗಲು ಬಂದಿರುವುದಾಗಿ ಉತ್ತರಿಸಿದ್ದಾರೆ.
ಪಾಟ್ಕರ್ ರಾಷ್ಟ್ರಮಟ್ಟದ ನಾಯಕಿ. ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿದ್ದರೆ, ಕನಿಷ್ಠ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಅವರನ್ನು ಮನೆಗೆ ಆಹ್ವಾನಿಸಿದವರಿಂದ ಭೇಟಿಯ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ. ಅವರಿಗೆ ಇಲ್ಲಿ ಏನಾದರೂ ಆದರೆ ಯಾರು ಹೊಣೆ. ಪೊಲೀಸರಿಗೆ ಮೊದಲೇ ತಿಳಿಸಿದ್ದರೆ ನಾವು ಅವರ ರಕ್ಷಣೆಗೆ ವ್ಯವಸ್ಥೆ ಮಾಡಬಹುದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಪಾಟ್ಕರ್ ಅವರನ್ನು ಕಾರ್ಯಕರ್ತರ ಮನೆಯಿಂದ ವಾಪಸ್ ತೆರಳುವಂತೆ ಸೂಚಿಸಲಾಯಿತು. ಇದಕ್ಕೂ ಮೂಸಿ ನದಿ ಪುನರುಜ್ಜೀವನ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.
ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮೂಸಿ ನದಿಯ ಪುನರುಜ್ಜೀವನಕ್ಕೆ ಯೋಜಿಸಿದೆ. ಇದಕ್ಕಾಗಿ ನದಿಯ ಅಕ್ಕಪಕ್ಕ ಕಟ್ಟಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಸರ್ಕಾರದ ನಡೆಗೆ ವಿರೋಧ ಪಕ್ಷಗಳಾದ ಬಿಆರ್‌ಎಸ್ ಮತ್ತು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.