ADVERTISEMENT

ಪೊಲೀಸರು ನೋಟಿಸ್ ನೀಡಲು ವಾಟ್ಸ್‌ಆ್ಯಪ್‌, ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ: SC

ಆಶಿಶ್ ತ್ರಿಪಾಠಿ
Published 28 ಜನವರಿ 2025, 4:23 IST
Last Updated 28 ಜನವರಿ 2025, 4:23 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಪೊಲೀಸರು ಆರೋಪಿಗಳಿಗೆ ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ನೀಡುವ ನೋಟಿಸ್ ಸೇವೆಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್‌ (ಅಪರಾಧ ಪ್ರಕ್ರಿಯಾ ಸಂಹಿತೆ) ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1973ರ ಸಿಆರ್‌ಪಿಸಿ ಸೆಕ್ಷನ್ 41-ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ (ಬಿಎನ್‌ಎಸ್‌ಎಸ್) ಸೆಕ್ಷನ್ 35ರ ಅಡಿಯಲ್ಲಿ ಸೂಚಿಸಲಾದ ಸೇವಾ ವಿಧಾನದ ಮೂಲಕ ಮಾತ್ರ ನೋಟಿಸ್‌ಗಳನ್ನು ಹೊರಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ADVERTISEMENT

ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯಾಗಿ ಕಾರ್ಯನಿರ್ವಹಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರ ಸಲಹೆಯನ್ನು ನ್ಯಾಯಪೀಠ ಪರಿಗಣಿಸಿದೆ ಎಂದು ವರದಿಯಾಗಿದೆ.

2024ರ ಜನವರಿ 26ರಂದು ಹರಿಯಾಣದ ಡಿಜಿಪಿ ಕಚೇರಿಯು ಆದೇಶವನ್ನು ಹೊರಡಿಸಿದ್ದು, 1973ರ ಸಿಆರ್‌ಪಿಸಿ ಸೆಕ್ಷನ್ 41-ಎ ಅಥವಾ 2023ರ ಬಿಎನ್‌ಎಸ್‌ಎಸ್‌ನ ಸೆಕ್ಷನ್ 35 ರ ಅಡಿಯಲ್ಲಿ ವೈಯಕ್ತಿಕವಾಗಿ ಅಥವಾ ವಾಟ್ಸ್‌ಆ್ಯಪ್‌, ಇ–ಮೇಲ್‌ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ನೋಟಿಸ್ ನೀಡಲು ಪೊಲೀಸ್ ಅಧಿಕಾರಿಗಳಿಗೆ ಅನುಮತಿ ನೀಡಿದ್ದರು ಎಂಬ ವಿಚಾರವನ್ನು ಇದೇ ವೇಳೆ ಪ್ರಸ್ತಾಪಿಸಲಾಗಿದೆ.

ವಕೀಲ ಸತೇಂದರ್ ಕುಮಾರ್ ಆಂಟಿಲ್ ಪ್ರಕರಣದಲ್ಲಿ ನ್ಯಾಯಾಲಯವು ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ನೀಡಲಾದ ನೋಟಿಸ್ ಅನ್ನು ಸೇವಾ ವಿಧಾನವೆಂದು ಪರಿಗಣಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ ಎಂದು ಅವರು ಹೇಳಿದರು.

ಸಾಮಾನ್ಯ ಸೇವಾ ವಿಧಾನವನ್ನು ಅನುಸರಿಸುವ ಬದಲು ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ನೋಟಿಸ್‌ಗಳನ್ನು ನೀಡುವ ಮೂಲಕ ಪೊಲೀಸರು ಕಾನೂನಿನ ಆದೇಶವನ್ನು ತಪ್ಪಿಸಬಾರದು ಎಂದು ಸಿದ್ಧಾರ್ಥ್ ಲೂಥ್ರಾ ಪ್ರತಿಪಾದಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ (ಬಿಎನ್‌ಎಸ್‌ಎಸ್) ಸೆಕ್ಷನ್ 532ರ ಅಡಿಯಲ್ಲಿ ಪ್ರಕರಣವೊಂದರ ವಿಚಾರಣೆ ಮತ್ತು ಪ್ರಕ್ರಿಯೆಗಳನ್ನು ಎಲೆಕ್ಟ್ರಾನಿಕ್ ಸಂವಹನ ಅಥವಾ ಆಡಿಯೊ-‌ವಿಡಿಯೊ ಮೂಲಕವು ನಡೆಸಬಹುದು ಹೇಳಲಾಗುತ್ತದೆ. ಆದರೆ, ಬಿಎನ್‌ಎಸ್‌ಎಸ್ ಸೆಕ್ಷನ್ 35ರ ಅಡಿಯಲ್ಲಿ ನೋಟಿಸ್ ಅನ್ನು ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ನೀಡಲು ಅನುಮತಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.