ADVERTISEMENT

Delhi Chalo | ರೈತರ ಮೇಲೆ ಮತ್ತೆ ಅಶ್ರುವಾಯು ಶೆಲ್‌ ಸಿಡಿಸಿದ ಪೊಲೀಸರು

ಮೃತ ರೈತನ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪಂಜಾಬ್‌ ಸಿ.ಎಂ

ಪಿಟಿಐ
Published 23 ಫೆಬ್ರುವರಿ 2024, 15:40 IST
Last Updated 23 ಫೆಬ್ರುವರಿ 2024, 15:40 IST
<div class="paragraphs"><p>ಶಂಭು ಗಡಿಯಲ್ಲಿ ಕರಾಳ ದಿನ ಆಚರಿಸಿದ ಪ್ರತಿಭಟನೆನಿರತ ರೈತರು ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು </p></div>

ಶಂಭು ಗಡಿಯಲ್ಲಿ ಕರಾಳ ದಿನ ಆಚರಿಸಿದ ಪ್ರತಿಭಟನೆನಿರತ ರೈತರು ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು

   

–ಪಿಟಿಐ ಚಿತ್ರ

ಹಿಸಾರ್/ಚಂಡೀಗಢ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹರಿಯಾಣದ ಹಿಸಾರ್‌ ಜಿಲ್ಲೆಯ ಖೇಡಿ ಚೋಪ್ಟಾ ಗ್ರಾಮದಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

ADVERTISEMENT

‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಸಲುವಾಗಿ ಖನೌರಿ ಗಡಿಯಲ್ಲಿರುವ ರೈತರಿಗೆ ಬೆಂಬಲ ಸೂಚಿಸಿ, ಅಲ್ಲಿಗೆ ಹೊರಟಿದ್ದ ರೈತರನ್ನು ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದರು. ಆಗ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಸಂಭವಿಸಿತು.

ಇದೇ ವೇಳೆ ಹರಿಯಾಣ ಪೊಲೀಸರು ಪ್ರತಿಭಟನೆನಿರತರ ವಿರುದ್ಧ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ಘರ್ಷಣೆಯಲ್ಲಿ ಕೆಲ ಪೊಲೀಸರು ಮತ್ತು ರೈತರು ಗಾಯಗೊಂಡರು.

ಪೊಲೀಸರ ಕ್ರಮವನ್ನು ಖಂಡಿಸಿದ ಭಾರತೀಯ ಕಿಸಾನ್‌ ಯೂನಿಯನ್‌ನ (ಬಿಕೆಯು) ಹಿಸಾರ್‌ ಘಟಕದ ಅಧ್ಯಕ್ಷ ಗೋಲು ದತ್ತಾ, ‘ಪೊಲೀಸರು ನಮ್ಮ ವಿರುದ್ಧ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು, ಲಾಠಿ ಪ್ರಹಾರ ನಡೆಸಿದರು ಮತ್ತು ಜಲಫಿರಂಗಿಯನ್ನೂ ಬಳಸಿದರು’ ಎಂದರು. ಇದನ್ನು ಖಂಡಿಸಿ ರೈತರು ಧರಣಿ ಕೈಗೊಂಡಿದ್ದಾರೆ ಎಂದೂ ಅವರು ತಿಳಿಸಿದರು. ಘರ್ಷಣೆಯ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. 

‌ಮೋದಿ, ಶಾ ಪ್ರತಿಕೃತಿ ದಹನ: ಪೊಲೀಸರ ಕ್ರಮ ಮತ್ತು ಸರ್ಕಾರದ ಧೋರಣೆಯನ್ನು ಖಂಡಿಸಿ ರೈತರು ಶಂಭು ಗಡಿಯಲ್ಲಿ ಕರಾಳ ದಿನ ಆಚರಿಸಿದರು. ಟ್ರ್ಯಾಕ್ಟರ್‌, ಟ್ರಾಲಿಗಳ ಮೇಲೆ ಕಪ್ಪು ಬಾವುಟ ಹಾರಿಸಿದರು. ಪ್ರತಿಭಟನಕಾರರು ತಮ್ಮ ಟರ್ಬನ್‌ಗಳ ಮೇಲೆ ಕಪ್ಪು ಬಟ್ಟೆ ಧರಿಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹೃದಯಾಘಾತದಿಂದ ರೈತ ಸಾವು: ಖನೌರಿ ಗಡಿಯಲ್ಲಿ ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 62 ವರ್ಷದ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ರೈತ ಮುಖಂಡ ಸರವಣ ಸಿಂಗ್‌ ಪಂಢೇರ್‌ ಶುಕ್ರವಾರ ತಿಳಿಸಿದ್ದಾರೆ. ಪಂಜಾಬಿನ ಬಠಿಂಡಾ ಜಿಲ್ಲೆಯ ಅಮರ್‌ಗಢ ಗ್ರಾಮದ ದರ್ಶನ್‌ ಸಿಂಗ್‌ ಮೃತ ರೈತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಖನೌರಿ ಗಡಿಯಲ್ಲಿ ಬುಧವಾರ ಪೊಲೀಸರು ಮತ್ತು ರೈತರ ನಡುವೆ ನಡೆದ ಘರ್ಷಣೆಯಲ್ಲಿ 21 ವರ್ಷದ ಶುಭಕರನ್‌ ಸಿಂಗ್‌ ಮೃತಪಟ್ಟಿದ್ದರು. ಆಗಲೂ ಪೊಲೀಸರು ಅಶ್ರುವಾಯು ಶೆಲ್‌ಗಳ ದಾಳಿ ನಡೆಸಿದ್ದರು. ಫೆಬ್ರುವರಿ 14ರಂದು ಶಂಭು ಗಡಿಯಲ್ಲಿ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳ ದಾಳಿ ಮತ್ತು ಲಾಠಿ ಪ್ರಹಾರ ನಡೆಸಿದ್ದರು.

ದಿನದ ಪ್ರಮುಖ ಬೆಳವಣಿಗೆಗಳು

* ರೈತ ಮುಖಂಡರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸುವ ನಿರ್ಧಾರವನ್ನು ಗುರುವಾರವಷ್ಟೇ ಪ್ರಕಟಿಸಿದ್ದ ಹರಿಯಾಣ ಪೊಲೀಸ್‌ ಶುಕ್ರವಾರ ಈ ನಿರ್ಧಾರದಿಂದ ಹಿಂದೆ ಸರಿದಿದೆ.  

* ಕರಾಳ ದಿನ ಆಚರಣೆ ಪ್ರಯುಕ್ತ ಪಂಜಾಬ್‌ನ 17 ಜಿಲ್ಲೆಗಳ 47 ಕಡೆಗಳಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಹಲವೆಡೆ ಬಿಜೆಪಿ ಮುಖಂಡರ ಪ್ರತಿಕೃತಿಗಳನ್ನು ದಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.