ADVERTISEMENT

ಹೋರಾಟದ ಹಿಂದೆ ರಾಜಕೀಯ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 20:08 IST
Last Updated 8 ಫೆಬ್ರುವರಿ 2021, 20:08 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದಿರುವುದು ರಾಜಕೀಯವೇ ವಿನಾ ರೈತರ ಅಭಿವೃದ್ಧಿ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದರು.

ರಾಜ್ಯಸಭೆಯಲ್ಲಿ ಮಾತನಾಡುತ್ತಾ, ವಿರೋಧ ಪಕ್ಷಗಳ ನಿಲುವು ಹಾಗೂ ಕೆಲವು ‘ವೃತ್ತಿಪರ ಹೋರಾಟಗಾರರ’ ವಿರುದ್ಧವೂ ಅವರು ಭಾರಿ ಟೀಕೆಗಳನ್ನು ಮಾಡಿದರು. ಜತೆಗೆ, ಮಾತುಕತೆಗೆ ಸರ್ಕಾರದ ಬಾಗಿಲುಗಳು ತೆರೆದಿವೆ. ರೈತರು ಪ್ರತಿಭಟನೆ ಕೊನೆಗೊಳಿಸಿ ಮಾತುಕತೆಗೆ ಬರಬೇಕು ಎಂದು ಮನವಿ ಮಾಡಿದರು.

‘ಸದನದಲ್ಲಿ ವಿರೋಧ ಪಕ್ಷದವರ ಮಾತುಗಳು ಚರ್ಚೆಗಿಂತ ಹೆಚ್ಚಾಗಿ ಪ್ರತಿಭಟನೆಯಂತೆ ಕಂಡುಬಂದವು. ಆದರೆ, ತಮ್ಮ ಆಕ್ಷೇಪಕ್ಕೆ ಕಾರಣವೇನೆಂಬುದನ್ನು ಯಾರೊಬ್ಬರೂ ಹೇಳಿಲ್ಲ’ ಎಂದ ಪ್ರಧಾನಿ, ಮಾಜಿ ಪ್ರಧಾನಿಗಳಾದ ಚರಣ್‌ ಸಿಂಗ್‌, ಮನಮೋಹನ ಸಿಂಗ್‌, ಲಾಲ್‌ ಬಹದ್ದೂರ್ ಶಾಸ್ತ್ರಿ ಹಾಗೂ ಎಚ್‌.ಡಿ. ದೇವೇಗೌಡ ಅವರು ಸದನದಲ್ಲಿ ಹಿಂದೆ ಆಡಿದ್ದ ಮಾತುಗಳನ್ನು ಉಲ್ಲೇ ಖಿಸಿ ವಿರೋಧ ಪಕ್ಷಗಳನ್ನು ಟೀಕಿಸಿದರು.

ADVERTISEMENT

ದಿನಾಂಕ ನಿಗದಿಮಾಡಲು ರೈತರ ಸೂಚನೆ

ಮಾತುಕತೆಗೆ ಬರುವಂತೆ ಪ್ರಧಾನಿ ಮೋದಿ ಅವರು ರಾಜ್ಯಸಭೆಯಲ್ಲಿ ಕರೆ ನೀಡಿದ ಬೆನ್ನಲ್ಲೇ, ‘ನಾವು ಸಿದ್ಧರಿದ್ದೇವೆ, ಮಾತುಕತೆಯ ದಿನಾಂಕವನ್ನು ನೀವೇ ನಿಗದಿಪಡಿಸಿ’ ಎಂದು ರೈತ ಸಂಘಟನೆಗಳು ಸರ್ಕಾರಕ್ಕೆ ಸೂಚಿಸಿವೆ.

‘ಸರ್ಕಾರದ ಜತೆಗೆ ಮಾತುಕತೆ ನಡೆಸಲು ನಾವು ಎಂದೂ ನಿರಾಕರಿಸಿಲ್ಲ. ಕರೆದಾಗಲೆಲ್ಲಾ ಹೋಗಿ ಕೇಂದ್ರದ ಸಚಿವರ ಜತೆ ಚರ್ಚಿಸಿದ್ದೇವೆ. ಈಗಲೂ ಅದಕ್ಕೆ ಸಿದ್ಧರಿದ್ದೇವೆ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡ ಶಿವಕುಮಾರ್‌ ಕಕ್ಕಾ ಹೇಳಿದ್ದಾರೆ.

ಸರ್ಕಾರ ಮತ್ತು ರೈತ ಸಂಘಟನೆಗಳ ಮಧ್ಯೆ 11 ಸುತ್ತಿನ ಮಾತುಕತೆಗಳು ಈಗಾಗಲೇ ನಡೆದಿವೆ. ಕೊನೆಯ ಬಾರಿ ನಡೆದ ಸಭೆಯಲ್ಲಿ ಕಾಯ್ದೆಗಳನ್ನು 12ರಿಂದ 18 ತಿಂಗಳ ಕಾಲ ಅಮಾನತಿನಲ್ಲಿಡುವ ಪ್ರಸ್ತಾವವನ್ನೂ ಸರ್ಕಾರವು ರೈತರ ಮುಂದೆ ಇಟ್ಟಿತ್ತು. ಆದರೆ, ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.