ADVERTISEMENT

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಇಂಡಿಯಾ ಬಣ – ಚುನಾವಣಾ ಆಯೋಗದ ಸಭೆ ಮುಂದಕ್ಕೆ

ಶಮಿನ್‌ ಜಾಯ್‌
Published 2 ಜುಲೈ 2025, 5:21 IST
Last Updated 2 ಜುಲೈ 2025, 5:21 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ಪಿಟಿಐ ಚಿತ್ರ

ನವದೆಹಲಿ: ಬಿಹಾರ ಮತದಾರರ ಪಟ್ಟಿಯ ವಿಶೇಷ ತ್ವರಿತ ಪರಿಷ್ಕರಣೆ (ಎಸ್‌ಐಆರ್‌) ಸಂಬಂಧ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ನಾಯಕರು ಹಾಗೂ ಚುನಾವಣಾ ಆಯೋಗದ ನಡುವೆ ಇಂದು (ಬುಧವಾರ, ಜುಲೈ 02) ನಡೆಯಬೇಕಿದ್ದ ಸಭೆ ಮುಂದೂಡಿಕೆಯಾಗಿದೆ. ಸಭೆಗೆ ಹಾಜರಾಗುವುದನ್ನು ಪಕ್ಷಗಳು ದೃಢಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎಸ್‌ಐಆರ್‌ ಕುರಿತು ಚರ್ಚಿಸಲು ಚುನಾವಣಾ ಆಯೋಗದಿಂದ ತುರ್ತು ಸಮಯವಾಕಾಶ ಕೋರಿದ್ದ ಕಾಂಗ್ರೆಸ್‌ ಪಕ್ಷದ ಕಾನೂನು ಸಲಹೆಗಾರರು, ಹಲವು ಪಕ್ಷಗಳ ಪರವಾಗಿ ಜೂನ್‌ 30ರಂದು ಇ–ಮೇಲ್‌ ಕಳುಹಿಸಿದ್ದರು. ಅದರಂತೆ ಜುಲೈ 2ರ ಸಂಜೆ 5ಕ್ಕೆ ಸಮಯ ನೀಡಲಾಗಿತ್ತು. ಆಯೋಗವು ಸಭೆಗೆ ಹಾಜರಾಗುವ ಪಕ್ಷಗಳಿಂದ ದೃಢೀಕರಣ ಕೋರಿದೆ. ಆದರೆ, ಈವರೆಗೆ ಯಾವುದೇ ದೃಢೀಕರಣ ಬಂದಿಲ್ಲ ಎನ್ನಲಾಗಿದೆ.

ಸಭೆಗೆ ಹಾಜರಾಗುವ ಪಕ್ಷದ ಪ್ರತಿನಿಧಿಗಳ ಹೆಸರು ನೀಡುವಂತೆ ಆಯೋಗ ಕೇಳಿತ್ತು.

ಏತನ್ಮಧ್ಯೆ, ಎಸ್‌ಐಆರ್‌ ವಿಚಾರವಾಗಿ ಚರ್ಚಿಸಲು ಇಂಡಿಯಾ ಬಣದ ನಾಯಕರು ಶೀಘ್ರದಲ್ಲೇ ಚುನಾವಣಾ ಆಯೋಗವನ್ನು ಭೇಟಿಯಾಗಲಿದ್ದಾರೆ ಎಂದು ವಿರೋಧ ಪಕ್ಷಗಳ ಮೂಲಗಳು ಹೇಳಿವೆ.

ಚುನಾವಣಾ ಆಯೋಗವು ನಾಳೆಯಿಂದಲೇ ಎಸ್‌ಐಆರ್‌ ಆರಂಭವಾಗಲಿದೆ ಎಂದು ಜೂನ್‌ 24ರಂದು ಘೋಷಿಸಿತ್ತು. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಪರಿಷ್ಕರಣೆಗೆ ಮುಂದಾಗಿರುವುದುನ್ನು ವಿರೋಧ ಪಕ್ಷಗಳು ಟೀಕಿಸಿವೆ. ಇದೂ ರಾಷ್ಟ್ರೀಯ ಪೌರತ್ವ ನೋಂದಣಿಯಂತಹ (ಎನ್‌ಆರ್‌ಸಿ) ಕ್ರಮವಾಗಿದ್ದು, ಸಾಕಷ್ಟು ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿವೆ.

ಎಸ್‌ಐಆರ್‌ ಅನ್ನು ದೃಢವಾಗಿ ವಿರೋಧಿಸುವುದಾಗಿ ಹೇಳಿರುವ ಕಾಂಗ್ರೆಸ್‌, ಇದೊಂದು ಮೋಸ ಮತ್ತು ಸಂಶಯಾಸ್ಪದ ಯೋಚನೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.