ADVERTISEMENT

ವಾಯು ಮಾಲಿನ್ಯ ಬಗ್ಗೆ ಸಂಸದೀಯ ಸಭೆಗೆ ಗೈರು; ಗೌತಮ್ ಗಂಭೀರ್ ವಿರುದ್ಧ ಎಎಪಿ ಕಿಡಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 12:03 IST
Last Updated 15 ನವೆಂಬರ್ 2019, 12:03 IST
ದೆಹಲಿಯಲ್ಲಿ ವಾಯು ಮಾಲಿನ್ಯ
ದೆಹಲಿಯಲ್ಲಿ ವಾಯು ಮಾಲಿನ್ಯ   

ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ವಿಷಯ ಚರ್ಚಿಸುವುದಕ್ಕಾಗಿ ಶುಕ್ರವಾರ ಸಂಸದೀಯ ಸಮಿತಿಯ ಉನ್ನತ ಮಟ್ಟದ ಸಭೆ ಕರೆಯಲಾಗಿತ್ತು. ಇದರಲ್ಲಿ 29 ಸಂಸದರ ಪೈಕಿ ನಾಲ್ವರು ಸಂಸದರು ಮತ್ತು ಇತರ ಕೆಲವು ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು.

ಸಭೆಗೆ ಹಾಜರಾಗದ ಸಂಸದರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಸಂಸದರು ಗೈರು ಹಾಜರಾಗಿರುವ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿರುವ ಸಮಿತಿಯು ಈ ವಿಷಯವನ್ನು ಲೋಕಸಭಾ ಸ್ಪೀಕರ್‌ಗೆ ತಲುಪಿಸಲಾಗುವುದು ಎಂದು ಹೇಳಿರುವುದಾಗಿ ಸಮಿತಿ ಸದಸ್ಯರೊಬ್ಬರು ಎನ್‌ಡಿಟಿವಿಗೆ ಹೇಳಿದ್ದಾರೆ.

ADVERTISEMENT

ನಗರಾಭಿವೃದ್ದಿಯ ಸಂಸದೀಯ ಸ್ಥಾಯಿ ಸಮಿತಿಯ ಸಭೆಗೆ ದೆಹಲಿ ಸಂಸದ ಗೌತಮ್ ಗಂಭೀರ್ ಹಾಜರಾಗಿಲ್ಲ. ಇನ್ನುಳಿದಂತೆ ಪರಿಸರ ಖಾತೆ ಕಾರ್ಯದರ್ಶಿ, ಅರಣ್ಯ ಇಲಾಖೆ ಕಾರ್ಯದರ್ಶಿ, ಹವಾಮಾನ ಬದಲಾವಣೆ ಸಂಬಂಧಿ ವಿಷಯಗಳನ್ನು ನಿಭಾಯಿಸುತ್ತಿರುವ ಕಾರ್ಯದರ್ಶಿ, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೂವರು ಮುಖ್ಯಸ್ಥರು ಈ ಸಭೆಗೆ ಬಂದಿರಲಿಲ್ಲ.

ಗಂಭೀರ್ ಅವರು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಪಂದ್ಯದ ಕಾಮೆಂಟೇಟರ್ ಕಾರ್ಯ ನಿರ್ವಹಿಸುತ್ತಿದ್ದು ಇಂದೋರ್‌ನಲ್ಲಿದ್ದಾರೆ.

ನಟಿ, ರಾಜಕಾರಣಿ ಮಥುರಾದ ಸಂಸದೆ ಹೇಮಾ ಮಾಲಿನಿ ಕೂಡಾ ಸಭೆಗೆ ಹಾಜರಾಗಿಲ್ಲ.

'ನೀವು ಈ ಬಗ್ಗೆ ನನಗೆ ಹೇಳಬೇಕಿತ್ತು. ನಾನು ಇದರ ಬಗ್ಗೆ ತನಿಖೆ ನಡೆಸುವೆ. ಮಾಲಿನ್ಯದ ಬಗ್ಗೆ ನಾವು ಗಂಭೀರ ಚರ್ಚೆ ನಡೆಸುತ್ತಿದ್ದೇವೆ. ವಾಯು ಮಾಲಿನ್ಯ ದೆಹಲಿಯ ಸಮಸ್ಯೆ ಮಾತ್ರವಲ್ಲ. ಜಂಟಿ ಕಾರ್ಯಯೋಜನೆಗೆ ನಾನು ಆದೇಶಿಸಿದ್ದೇನೆ. ಸಹಭಾಗಿತ್ವದೊಂದಿಗೆ ತಂಡಗಳು ಕಾರ್ಯನಿರ್ವಹಿಸುತ್ತಿವೆ' ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಜಾವಡೇಕರ್ ಹೇಳಿದ್ದಾರೆ.

ಬಿಜೆಪಿಯ ಜಗದಂಬಿಕಾ ಪಾಲ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ನ್ಯಾಷನಲ್ ಕಾನ್ಸರೆನ್ಸ್ ಪಕ್ಷದ ಹಸನೈನ್ ಮಸೂದಿ ಮತ್ತು ಬಿಜೆಪಿಯ ಸಿ.ಆರ್. ಪಾಟಿಲ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಸಭೆಗೆ ಹಾಜರಾಗದಿರುವ ಸಂಸದ ಗೌತಮ್ ಗಂಭೀರ್ ವಿರುದ್ಧ ಆಮ್ ಆದ್ಮಿ ಪಕ್ಷ ಟ್ವೀಟರ್‌ನಲ್ಲಿ ಟೀಕಾ ಪ್ರಹಾರ ನಡೆಸಿದ್ದು#ShameOnGautamGambhirಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.