ADVERTISEMENT

ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಪೊಂಗಲ್ ಉಡುಗೊರೆ ಘೋಷಿಸಿದ ಸ್ಟಾಲಿನ್ ಸರ್ಕಾರ

ಪಿಟಿಐ
Published 4 ಜನವರಿ 2026, 11:37 IST
Last Updated 4 ಜನವರಿ 2026, 11:37 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ: ಪೊಂಗಲ್ ಹಬ್ಬದ ಪ್ರಯುಕ್ತ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ಮತ್ತು ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ₹3,000 ನಗದು ಉಡುಗೊರೆಯನ್ನು ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ.

ಜನವರಿ 15 ರಂದು ಪೊಂಗಲ್ ಆಚರಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಸಾರ್ವಜನಿಕ ಉದ್ಯೋಗಿಗಳನ್ನು ಹೊರತುಪಡಿಸಿ ಎಲ್ಲಾ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ‘ಪೊಂಗಲ್ ಉಡುಗೊರೆ’ಯಾಗಿ ₹3,000ಹಣ ನೀಡಲಾಗುವುದು ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಕಬ್ಬು, ತಲಾ ಒಂದು ಕೆ.ಜಿ ಅಕ್ಕಿ, ತುಪ್ಪ ಹಾಗೂ ಸಕ್ಕರೆಯನ್ನು ಒಳಗೊಂಡಿರುವ ಪೊಂಗಲ್ ಗಿಫ್ಟ್ ಹ್ಯಾಂಪರ್ ಅನ್ನು ಸರ್ಕಾರ ಈಗಾಗಲೇ ಘೋಷಿಸಿದೆ. ಪೊಂಗಲ್ ಗಿಫ್ಟ್ ಹ್ಯಾಂಪರ್ ಜತೆಗೆ ಉಚಿತ ಧೋತಿ ಮತ್ತು ಸೀರೆಗಳನ್ನು ಸಹ ವಿತರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ADVERTISEMENT

ಏಪ್ರಿಲ್ ಅಥವಾ ಮೇನಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತಮಿಳುನಾಡಿನ ಡಿಎಂಕೆ ಸರ್ಕಾರ ಪಡಿತರ ಚೀಟಿದಾರರಿಗೆ ಪೊಂಗಲ್‌ ಉಡುಗೊರೆ ಜೊತೆ ನಗದು ರೂಪದ ನೆರವು ನೀಡುವ ಕಾರ್ಯಕ್ರಮ ಮರು ಜಾರಿಗೊಳಿಸಿದೆ ಎಂದು ವರದಿಯಾಗಿದೆ.

2023 ಮತ್ತು 2024ರಲ್ಲಿ ತಮಿಳುನಾಡು ಸರ್ಕಾರ ಪ್ರತಿ ಕುಟುಂಬಕ್ಕೆ ಪೊಂಗಲ್‌ ಉಡುಗೊರೆ ಜೊತೆಗೆ ₹1,000 ನಗದು ನೀಡಿತ್ತು. ಆದರೆ, 2025ರಲ್ಲಿ ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಈ ನೆರವು ನೀಡಿರಲಿಲ್ಲ.

2021ರಲ್ಲಿ ಎಐಎಡಿಎಂಕೆ ಸರ್ಕಾರವೂ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗ ಪ್ರತಿ ಕುಟುಂಬಕ್ಕೆ ಪೊಂಗಲ್ ಉಡುಗೊರೆಯಾಗಿ ₹2,500 ನೀಡಿತ್ತು. ಇದನ್ನು ಅಂದಿನ ವಿಪಕ್ಷ ಡಿಎಂಕೆ ವಿರೋಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.