
ಸುಪ್ರೀಂ ಕೋರ್ಟ್ ಮತ್ತು ಅಪಘಾತಕ್ಕೊಳಗಾಗಿದ್ದ ಪೋಶೆ ಕಾರು
ನವದೆಹಲಿ: ಪುಣೆ ಪೋಶೆ ಕಾರು ಅಪಘಾತ ಪ್ರಕರಣದ ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಜತೆಗೆ, ಬಾಲಾಪರಾಧಿಗಳನ್ನು ಒಳಗೊಂಡ ಇಂತಹ ಘಟನೆಗಳಿಗೆ ಪೋಷಕರೇ ಕಾರಣ ಎಂದೂ ಅಭಿಪ್ರಾಯಪಟ್ಟಿದೆ.
ಸದ್ಯದ ಕಾಲಘಟ್ಟದಲ್ಲಿ ಮಕ್ಕಳನ್ನು ನಿಯಂತ್ರಿಸಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ತಿಳಿಸಿದೆ.
ಮಾದಕ ವಸ್ತುಗಳ ದುರುಪಯೋಗ ಒಂದು ಕಡೆಯಾದರೆ, ಪೋಷಕರು ಮಕ್ಕಳಿಗೆ ಹಣ ಮತ್ತು ವಾಹನ ಚಲಾಯಿಸಲು ಅವಕಾಶ ನೀಡುತ್ತಿರುವುದು ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ ಎಂದೂ ನ್ಯಾಯಪೀಠ ಹೇಳಿದೆ.
ಬಾಂಬೆ ಹೈಕೋರ್ಟ್ 2025ರ ಡಿಸೆಂಬರ್ 16ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆರೋಪಿ ಅಮರ್ ಸತೀಶ್ ಗಾಯಕ್ವಾಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಪ್ರಮುಖ ಆರೋಪಿ 17 ವರ್ಷದ ಬಾಲಕನನ್ನು ಬಚಾವ್ ಮಾಡಲು ಮತ್ತು ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಅಮರ್ ಸತೀಶ್ ಗಾಯಕ್ವಾಡ್ ಆಸ್ಪತ್ರೆಯ ವೈದ್ಯರಿಗೆ ₹3 ಲಕ್ಷ ಹಣ ನೀಡಿದ್ದ ಎಂದು ಆರೋಪಿಸಲಾಗಿದೆ.
2024ರ ಮೇ 19ರಂದು ಪುಣೆಯ ಕಲ್ಯಾಣಿನಗರದಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕಿಗಳು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಬಾಲಕ, ಆತನ ತಂದೆ ಸೇರಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.