ADVERTISEMENT

25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ ಮೋದಿ ಸರ್ಕಾರ: ಸ್ಮೃತಿ ಇರಾನಿ

ಪಿಟಿಐ
Published 10 ಜೂನ್ 2025, 11:46 IST
Last Updated 10 ಜೂನ್ 2025, 11:46 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

(ಸಂಗ್ರಹ ಚಿತ್ರ)

ರಾಂಚಿ: ‘ಮೋದಿ ಸರ್ಕಾರವು ಕಳೆದ 11 ವರ್ಷಗಳ ಅವಧಿಯಲ್ಲಿ ದೇಶದ 25 ಕೋಟಿ ಜನರನ್ನು ಬಹು ಆಯಾಮದ ಬಡತನದಿಂದ ಮೇಲೆತ್ತಿದೆ’ ಎಂದು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಹೇಳಿದರು. 

‘ಮೋದಿ ಸರ್ಕಾರಕ್ಕೆ 11 ವರ್ಷಗಳು ತುಂಬಿದ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘11 ವರ್ಷಗಳಲ್ಲಿ ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. 15 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಉಜ್ವಲ ಯೋಜನೆಯಡಿ 12 ಕೋಟಿ  ಅಡುಗೆ ಅನಿಲದ ಸಿಲಿಂಡರ್‌ ವಿತರಿಸಲಾಗಿದೆ. 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ’  ಎಂದರು.

‘ರಾಷ್ಟ್ರೀಯತೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಗಾಂಧಿ ಮಾರ್ಗ, ಸಮಾನತೆ, ಮೌಲ್ಯಾಧಾರಿತ ರಾಜಕಾರಣ ಒಳಗೊಂಡ ‘ಪಂಚತತ್ವ’ದಲ್ಲಿ ಬಿಜೆಪಿ ನಂಬಿಕೆ ಇರಿಸಿದೆ. ಮೋದಿ ಸಚಿವ ಸಂಪುಟದಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೆ ಪ್ರಾತಿನಿಧ್ಯ ಸಿಕ್ಕಿದೆ’ ಎಂದರು. 

‘ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್‌ ನದಿಗೆ ನಿರ್ಮಿಸಿರುವ ರೈಲ್ವೆ ಸೇತುವೆಯನ್ನು ಉದ್ಘಾಟಿಸುವ ಮೂಲಕ ಪ್ರಧಾನಿ ಅವರು ಅಟಲ್‌ಜಿ ಅವರ ಕನಸನ್ನು ನನಸು ಮಾಡಿದ್ದಾರೆ’ ಎಂದು ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದರು.  ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ‘ಅಟಲ್‌ಜೀ ಅವರು ಚೆನಾಬ್‌ ನದಿ  ಸೇತುವೆ ಯೋಜನೆಗೆ ರಾಷ್ಟ್ರೀಯ ಮಹತ್ವ ನೀಡಿದ್ದರು’ ಎಂದರು. 

‘ಆಪರೇಷನ್‌ ಸಿಂಧೂರ್‌’ ನಂತರ ಭಾರತದಿಂದ ರಕ್ಷಣಾ ಸರಕುಗಳ ರಫ್ತು 34 ಪಟ್ಟು ಹೆಚ್ಚಳವಾಗಿದೆ.  ‘ಮೇಕ್‌ ಇನ್‌ ಇಂಡಿಯಾ’ ರಕ್ಷಣಾ ವ್ಯವಸ್ಥೆಯು ವಿಶ್ವವ್ಯಾಪಿ ಮೆಚ್ಚುಗೆ ಗಳಿಸಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.