ADVERTISEMENT

ಕೇಂದ್ರ ಸರ್ಕಾರದಲ್ಲಿ ಸ್ಥಾನ ಪಡೆದ ಮೊದಲ ತ್ರಿಪುರ ನಿವಾಸಿ ಪ್ರತಿಮಾ ಭೌಮಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2021, 9:07 IST
Last Updated 8 ಜುಲೈ 2021, 9:07 IST
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರತಿಮಾ ಭೌಮಿಕ್
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರತಿಮಾ ಭೌಮಿಕ್   

ಅಗರ್ತಲಾ: ತ್ರಿಪುರದಿಂದ ಕೇಂದ್ರ ಸಚಿವರ ಸ್ಥಾನಕ್ಕೇರಿರುವ ಮೊಟ್ಟ ಮೊದಲ ಸ್ಥಳೀಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪ್ರತಿಮಾ ಭೌಮಿಕ್‌ (52) ಪಾತ್ರರಾಗಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆಯ ಹೊಣೆ ನೀಡಲಾಗಿದೆ.

'ಪ್ರತಿಮಾ ದಿ' ಎಂದೇ ಪರಿಚಿತರಾಗಿರುವ ಪ್ರತಿಮಾ ಭಾಮಿಕ್‌ ಅವರು ತ್ರಿಪುರದಲ್ಲಿ ಬಿಜೆಪಿಯ ಅತಿ ಹಿರಿಯ ನಾಯಕಿ. ವಿಜ್ಞಾನ ವಿಷಯಗಳಲ್ಲಿ ಪದವೀಧರೆಯಾಗಿರುವ ಭೌಮಿಕ್‌ ಅವರು 1991ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಅಂದಿನಿಂದಲೂ ರಾಜ್ಯದಲ್ಲಿ ಬಿಜೆಪಿ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ತ್ರಿಪುರದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಮಾಣಿಕ್‌ ಸರ್ಕಾರ್‌ ಎದುರು 1998 ಮತ್ತು 2018ರ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2019ರ ಲೋಕಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆಯಾದರು.

ADVERTISEMENT

ಶಾಲಾ ಶಿಕ್ಷಕರ ಮಗಳಾದ ಭೌಮಿಕಾ, ಖೋ–ಖೋ ಮತ್ತು ಕಬಡ್ಡಿ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರು. ಅವರು ಸ್ವಗ್ರಾಮ ಬಾರನಾರಾಯಣದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೇಂದ್ರ ಸಂಪುಟದಲ್ಲಿ ಮಹಿಳಾ ಸಚಿವರು

ತ್ರಿಪುರದಿಂದ ಈ ಹಿಂದೆ...

ಪಶ್ಚಿಮ ಬಂಗಾಳ ಮೂಲದ ತ್ರಿಗುಣ ಸೇನ್‌ ಅವರುತ್ರಿಪುರದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ಪ್ರಧಾನಿ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಅಸ್ಸಾಂ ನಿವಾಸಿ ಸಂತೋಷ್‌ ಮೋಹನ್‌ ದೇವ್‌ ಅವರು 1989ರಲ್ಲಿ ತ್ರಿಪುರದ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು ಪ್ರಧಾನಿ ರಾಜೀವ್‌ ಗಾಂಧಿ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.