ADVERTISEMENT

ಹರ್‌ಸಿಮ್ರತ್‌ ಕೌರ್ ಬಾದಲ್‌ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ ಕೋವಿಂದ್

ಏಜೆನ್ಸೀಸ್
Published 18 ಸೆಪ್ಟೆಂಬರ್ 2020, 4:48 IST
Last Updated 18 ಸೆಪ್ಟೆಂಬರ್ 2020, 4:48 IST
ಹರ್‌ಸಿಮ್ರತ್‌ ಕೌರ್ ಬಾದಲ್‌
ಹರ್‌ಸಿಮ್ರತ್‌ ಕೌರ್ ಬಾದಲ್‌    

ನವದೆಹಲಿ: ಕೇಂದ್ರದ ಕೃಷಿ ಮಸೂದೆಯನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್ ಅವರು ಕೇಂದ್ರ ಮಂತ್ರಿ ಮಂಡಳಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಅಂಗೀಕರಿಸಿದ್ದಾರೆ.

ಇದಲ್ಲದೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಉಸ್ತುವಾರಿ ವಹಿಸುವಂತೆ ನರೇಂದ್ರ ಸಿಂಗ್ ತೋಮರ್‌ ಅವರಿಗೆ ನಿರ್ದೇಶನ ನೀಡಿದ್ದಾರೆ.

ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಗುರುವಾರ ಹರ್ಸಿಮ್ರತ್ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

ಪಕ್ಷದ ವಕ್ತಾರ ಹರ್‌ಚರಣ್‌ ಬೈನ್ಸ್‌ ಅವರು ಈ ವಿಚಾರವನ್ನೂ ಅಧಿಕೃತವಾಗಿ ಘೋಷಣೆ ಮಾಡಿ, ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರಬಂದಿದ್ದಾರೆ ಎಂದುತಿಳಿಸಿದ್ದರು.

ಪ್ರಧಾನಮಂತ್ರಿಯವರ ಸಲಹೆಯಂತೆ ರಾಷ್ಟ್ರಪತಿಗಳು, ಸಂವಿಧಾನದ 75ನೇ ಪರಿಚ್ಛೇದ 75 ರ (2)ನೇ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಇದಲ್ಲದೆ, ಸಂಪುಟ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹೆಚ್ಚುವರಿಯಾಗಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಉಸ್ತುವಾರಿಯನ್ನು ವಹಿಸಬೇಕೆಂದು ರಾಷ್ಟ್ರಪತಿಗಳು ನಿರ್ದೇಶಿಸಿದ್ದಾರೆ' ಎಂದೂ ಅದು ಹೇಳಿದೆ.

ಕೇಂದ್ರದ ರೈತ ವಿರೋಧಿ ಕ್ರಮವನ್ನು ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್‌ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹರ್‌ಸಿಮ್ರತ್ ಅವರ ಪತಿ ಮತ್ತು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಹರ್‌ಸಿಮ್ರತ್‌ ಕೌರ್‌ ರಾಜೀನಾಮೆ ಸಲ್ಲಿಸಿದ್ದರು. ಮಸೂದೆಗಳು ಸುಗ್ರೀವಾಜ್ಞೆಗಳನ್ನು ಬದಲಿಸುವ ಗುರಿಯನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.