ADVERTISEMENT

ಮದ್ರಾಸ್ ವಿ.ವಿ ತಿದ್ದುಪಡಿ ಮಸೂದೆ ಹಿಂದಿರುಗಿಸಿದ ರಾಷ್ಟ್ರಪತಿ ಮುರ್ಮು

ಪಿಟಿಐ
Published 30 ಡಿಸೆಂಬರ್ 2025, 12:36 IST
Last Updated 30 ಡಿಸೆಂಬರ್ 2025, 12:36 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಚೆನ್ನೈ: ತಮಿಳುನಾಡು ಮದ್ರಾಸ್‌ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಿಂದಿರುಗಿಸಿದ್ದಾರೆ ಎಂದು ಮೂಲಗಳು ಮಂಗಳವಾರ ಹೇಳಿವೆ.

ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುವ ಅವಕಾಶವನ್ನು ಈ ಮಸೂದೆ ಒಳಗೊಂಡಿದೆ.

ಈ ಮಸೂದೆಯನ್ನು 2022ರ ಏಪ್ರಿಲ್‌ನಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ರಾಜ್ಯ ಸರ್ಕಾರ, ಅಂಕಿತಕ್ಕಾಗಿ ರಾಷ್ಟ್ರಪತಿಗೆ ಕಳುಹಿಸಿತ್ತು. ಮರುಪರಿಶೀಲನೆಗಾಗಿ ಈ ಮಸೂದೆಯನ್ನು ರಾಷ್ಟ್ರಪತಿಯವರು ಇತ್ತೀಚೆಗಷ್ಟೆ ವಿಧಾನಸಭೆಗೆ ಹಿಂದಿರುಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಇದಕ್ಕೂ ಮುನ್ನ, ರಾಜ್ಯಪಾಲ ಆರ್‌.ಎನ್‌.ರವಿ ಅವರು ರಾಷ್ಟ್ರಪತಿಯವರ ಪರಿಗಣನೆಗಾಗಿ ಈ ಮಸೂದೆಯನ್ನು ಕಾಯ್ದಿರಿಸಿದ್ದರು. ಪ್ರಸ್ತಾವಿತ ಮಸೂದೆಯು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ನಿಬಂಧನೆಗಳು ಹಾಗೂ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಕಾರಣ ನೀಡಿ, ಅವರು ಇಂತಹ ಕ್ರಮ ಕೈಗೊಂಡಿದ್ದರು.

ಮದ್ರಾಸ್‌ ವಿಶ್ವವಿದ್ಯಾಲಯಕ್ಕೆ 168 ವರ್ಷಗಳ ಇತಿಹಾಸ ಇದೆ. ಕಳೆದ ಎರಡು ವರ್ಷಗಳಿಂದ ವಿ.ವಿ ಕುಲಪತಿ ಹುದ್ದೆ ಖಾಲಿ ಇದೆ. ರಾಜ್ಯಪಾಲರೇ ಈಗ ಪದನಿಮಿತ್ತ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ವಿ.ವಿಗೆ ಕುಲಪತಿ ನೇಮಕ ಮಾಡುವ ಹಾಗೂ ಅವರನ್ನು ತೆಗೆದು ಹಾಕುವ ಅಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ. ಮದ್ರಾಸ್‌ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತಂದು, ರಾಜ್ಯಪಾಲರ ಈ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಬೇಕು ಎಂಬ ಅವಕಾಶವನ್ನು ಈ ತಿದ್ದುಪಡಿ ಮಸೂದೆ ಒಳಗೊಂಡಿದೆ.

ತಮಿಳುನಾಡಿನಲ್ಲಿರುವ 22 ವಿಶ್ವವಿದ್ಯಾಲಯಗಳ ಪೈಕಿ, ಮದ್ರಾಸ್‌ ವಿ.ವಿ ಸೇರಿ 14 ವಿ.ವಿಗಳಲ್ಲಿ ಕುಲಪತಿ ಹುದ್ದೆಗಳು ಖಾಲಿ ಇವೆ. ಸಂಚಾಲಕ ಸಮಿತಿಗಳೇ ಈ ವಿ.ವಿಗಳ ಆಡಳಿತದ ಹೊಣೆ ಹೊತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.