ADVERTISEMENT

ಫೋಟೊ ಜರ್ನಲಿಸ್ಟ್‌ಗಳ ಮೇಲೆ ಪೊಲೀಸರಿಂದ ಹಲ್ಲೆ; ಮಾಧ್ಯಮ ಸಂಘಟನೆಗಳಿಂದ ಪ್ರತಿಭಟನೆ

ಪಿಟಿಐ
Published 27 ಮಾರ್ಚ್ 2024, 3:14 IST
Last Updated 27 ಮಾರ್ಚ್ 2024, 3:14 IST
<div class="paragraphs"><p>ಎಎಪಿ ಪ್ರತಿಭಟನೆ ವೇಳೆ ಪೊಲೀಸ್‌ ಅಧಿಕಾರಿಯೊಬ್ಬ ಫೋಟೊ ಜರ್ನಲಿಸ್ಟ್‌ ಕುತ್ತಿಗೆಗೆ ಕೈ ಹಾಕಿರುವುದು<br></p></div>

ಎಎಪಿ ಪ್ರತಿಭಟನೆ ವೇಳೆ ಪೊಲೀಸ್‌ ಅಧಿಕಾರಿಯೊಬ್ಬ ಫೋಟೊ ಜರ್ನಲಿಸ್ಟ್‌ ಕುತ್ತಿಗೆಗೆ ಕೈ ಹಾಕಿರುವುದು

   

ಪಿಟಿಐ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ನಡೆಸುತ್ತಿರುವ ಪ್ರತಿಭಟನೆ ವೇಳೆ ಕೆಲವು ಫೋಟೊ ಜರ್ನಲಿಸ್ಟ್‌ಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಮಾಧ್ಯಮ ಸಂಘಟನೆಗಳು ಮಂಗಳವಾರ ಒತ್ತಾಯಿಸಿವೆ.

ADVERTISEMENT

ಈ ಸಂಬಂಧ ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ಹಾಗೂ ದೆಹಲಿ ಪತ್ರಕರ್ತರ ಸಂಘ ಪ್ರತ್ಯೇಕ ಪ್ರಕಟಣೆಗಳನ್ನು ಹೊರಡಿಸಿವೆ. ಎಎಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಸೆರೆಹಿಡಿಯುತ್ತಿದ್ದ ಫೋಟೊ ಜರ್ನಲಿಸ್ಟ್‌ಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿರುವುದು ಖಂಡನೀಯ ಎಂದು ಕಿಡಿಕಾರಿವೆ.

ಪೊಲೀಸ್‌ ಅಧಿಕಾರಿಯೊಬ್ಬ ಫೋಟೊ ಜರ್ನಲಿಸ್ಟ್‌ ಕುತ್ತಿಗೆ ಹಿಡಿದಿರುವ ಚಿತ್ರವನ್ನು ಪ್ರೆಸ್‌ ಕ್ಲಬ್‌ ಹಂಚಿಕೊಂಡಿವೆ.

'ದೆಹಲಿ ಪೊಲೀಸರ ಸೊಕ್ಕಿನ ಕ್ರಮದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ. ನೊಂದ ಫೋಟೊ ಜರ್ನರ್ಲಿಸ್ಟ್‌ಗಳಿಗೆ ನ್ಯಾಯ ಸಿಕ್ಕರೆ, ಅವರು ಪೊಲೀಸರ ದೌರ್ಜನ್ಯವನ್ನು ಲೆಕ್ಕಿಸದೆ ನಿರ್ಭೀತಿಯಿಂದ ವೃತ್ತಿಪರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ' ಎಂದು ಪ್ರೆಸ್‌ ಕ್ಲಬ್‌ ಹೇಳಿಕೆ ಬಿಡುಗಡೆ ಮಾಡಿದೆ.

ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಮತ್ತು ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಪತ್ರಕರ್ತರ ಸಂಘ ಆಗ್ರಹಿಸಿದೆ.

ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಕೇಜ್ರಿವಾಲ್‌, ಎಎಪಿಯ ರಾಷ್ಟ್ರೀಯ ಸಂಚಾಲಕರೂ ಹೌದು. ಹೀಗಾಗಿ, ಜಾರಿ ನಿರ್ದೇಶನಾಲಯದ ಕ್ರಮ ಖಂಡಿಸಿ ಎಎಪಿ ಪ್ರತಿಭಟನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.