ADVERTISEMENT

ಗಾಂಧೀಜಿಯನ್ನು ಕೊಂದ ಗೋಡ್ಸೆ ಬಗ್ಗೆ ನಿಮ್ಮ ನಿಲುವೇನು? ಮೋದಿಗೆ ಪ್ರಿಯಾಂಕ ಪ್ರಶ್ನೆ

ಅಮೇಥಿ ಕ್ಷೇತ್ರಕ್ಕೆ ರಾಹುಲ್‌ ರಾಜೀನಾಮೆ?

​ಪ್ರಜಾವಾಣಿ ವಾರ್ತೆ
Published 18 ಮೇ 2019, 4:50 IST
Last Updated 18 ಮೇ 2019, 4:50 IST
   

ನವದೆಹಲಿ: ‘ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಂ ಗೋಡ್ಸೆ ಬಗ್ಗೆ ನಿಮ್ಮ ನಿಲುವೇನು?’ ಎಂದುಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾರ್ದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ಇತ್ತೀಚೆಗೆ ಪ್ರಿಯಾಂಕಾ ಅವರ ಸಂದರ್ಶನ ನಡೆಸಿತ್ತು. ಈ ವೇಳೆ,ಗೋಡ್ಸೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಭೋಪಾಲ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕ್ಷಮಿಸುವುದಿಲ್ಲ ಎಂದು ಹೇಳಿರುವುದರ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ, ‘ದೇಶ ಕಟ್ಟಿದವರನ್ನು ಕೊಲ್ಲುವುದು ದೇಶಭಕ್ತಿಯೇ? ಸಾಧ್ವಿ ಅವರನ್ನು ಕ್ಷಮಿಸುವುದಿಲ್ಲ ಎಂದು ನೀವು(ಮೋದಿ) ಹೇಳಿದ್ದೀರಿ. ಆದರೆ, ಗೋಡ್ಸೆ ವಿಚಾರವಾಗಿ ನಿಮ್ಮ ನಿಲುವು ಏನು?’ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ‘ಅವರು ಸಾಧ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಗೋಡ್ಸೆ ಬಗ್ಗೆ ಅವರು ಹೊಂದಿರುವ ನಿಲುವನ್ನು ಸ್ಪಷ್ಟಪಡಿಸಬೇಕು.ಗೋಡ್ಸೆ ಬಗ್ಗೆ ಪ್ರಧಾನಿ ಚಿಂತನೆ ಏನೆಂಬುದು ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.‌

ಗಾಂಧಿ ಹತ್ಯೆ ಹಾಗೂ ಗೋಡ್ಸೆ ವಿಚಾರವಾಗಿಇತ್ತೀಚೆಗೆ ಮಾತನಾಡಿದ್ದ ಸಾಧ್ವಿ,ಗೋಡ್ಸೆ ದೇಶಭಕ್ತನಾಗಿದ್ದ. ಆತ ದೇಶಭಕ್ತನಾಗಿಯೇ ಉಳಿಯಲಿದ್ದಾನೆ. ಆತನನ್ನು ಉಗ್ರ ಎಂದು ಕರೆಯುವವರು ತಮ್ಮನ್ನು ತಾವೇ ನೋಡಿಕೊಳ್ಳಬೇಕು. ಇಂತಹ ಜನರಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಪ್ರಧಾನ ಮಂತ್ರಿಯಾದ ಬಳಿಕ ಇದೇ ಮೊದಲ ಸಲ(ಶುಕ್ರವಾರ) ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಮೋದಿ ಅವರು ಸಾಧ್ವಿ ಹೇಳಿಕೆ ಕುರಿತು, ‘ಗಾಂಧೀಜಿ ಅಥವಾ ನಾಥೂರಾಂ ಗೋಡ್ಸೆ ಬಗ್ಗೆ ಬಂದಿರುವ ಹೇಳಿಕೆಗಳು ಕೆಟ್ಟದಾಗಿವೆ. ಸಮಾಜಕ್ಕೆ ಒಳ್ಳೆಯದಲ್ಲ. ಅವರು (ಸಾಧ್ವಿ) ಕ್ಷಮೆ ಕೇಳಿದ್ದಾರೆ. ಹಾಗಿದ್ದರೂ ಅವರನ್ನು ಕ್ಷಮಿಸಲು ನನಗೆ ಸಾಧ್ಯವಿಲ್ಲ’ಎಂದು ಹೇಳಿದ್ದರು.

ಅಮೇಥಿಯಿಂದ ಸ್ಪರ್ಧೆ
ರಾಹುಲ್‌ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಥಿ ಹಾಗೂ ಕೇರಳದ ವಯನಾಡ್‌ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯ. ಹೀಗಾಗಿ ‘ರಾಹುಲ್‌ ಅವರು ಪಕ್ಷ ಹಾಗೂ ಕುಟುಂಬದ ಭದ್ರಕೋಟೆಯಾಗಿರುವ ಅಮೇಥಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರೆ ನೀವು ಇಲ್ಲಿಂದ ಸ್ಪರ್ಧಿಸುವಿರಾ?’ ಎಂದು ಪ್ರಿಯಾಂಕಾ ಅವರನ್ನು ಪ್ರಶ್ನಿಸಲಾಯಿತು.

‘ಅದು ಸವಾಲೇನು ಅಲ್ಲ’ ಎಂದುಪ್ರತಿಕ್ರಿಯಿಸಿದ ಅವರು, ‘ಯಾವ ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು ಎಂಬುದನ್ನು ನನ್ನ ಸೋದರ ತೀರ್ಮಾನಿಸಬೇಕು. ಅದಾದ ಬಳಿಕವೇ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.