ADVERTISEMENT

ಪ್ರಧಾನಿ ಮೋದಿ ಸ್ಪೀಕರ್ ಹಿಂದೆ ಅಡಗಿಕೊಂಡಿದ್ದಾರೆ: ಪ್ರಿಯಾಂಕಾ ಗಾಂಧಿ ಕಿಡಿ

ಪಿಟಿಐ
Published 5 ಫೆಬ್ರುವರಿ 2026, 11:41 IST
Last Updated 5 ಫೆಬ್ರುವರಿ 2026, 11:41 IST
ಪ್ರಿಯಾಂಕ ಗಾಂಧಿ ವಾದ್ರ
ಪ್ರಿಯಾಂಕ ಗಾಂಧಿ ವಾದ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಹಿಂದೆ ಅಡಗಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಆರೋಪಿಸಿದ್ದಾರೆ.

ಇದೇ ವೇಳೆ, ಪ್ರಧಾನಿಗೆ ವಿಪಕ್ಷಗಳು ನೋವುಂಟು ಮಾಡುವ ಯೋಜನೆ ಇದೆ ಎಂಬುದು ‘ಸಂಪೂರ್ಣ ಸುಳ್ಳು’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಸಂದರ್ಭದಲ್ಲಿ ವಿಪಕ್ಷಗಳು ‘ಅನಿರೀಕ್ಷಿತ ಕೃತ್ಯ’ ಎಸಗಬಹುದು ಎಂಬ ಕಾರಣ ನೀಡಿ, ಸ್ಪೀಕರ್ ಓಂ ಬಿರ್ಲಾ ಅವರು ಮೋದಿಯವರಿಗೆ ಭಾಷಣ ಮಾಡಲು ಸದನಕ್ಕೆ ಬಾರದಂತೆ ಕೇಳಿಕೊಂಡಿರುವುದಾಗಿ ತಿಳಿಸಿದ ಬಳಿಕ, ಪ್ರಿಯಾಂಕ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಕಲಾಪದ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್, ಬುಧವಾರ ತಮ್ಮ ಕಚೇರಿಯಲ್ಲಿ ಕೆಲವು ಸದಸ್ಯರು ನಡೆದುಕೊಂಡ ವರ್ತನೆ ಸರಿಯಾಗಿರಲಿಲ್ಲ. ಅದು, ಸಂಸದರ ಘನತೆಗೆ ’ಕಪ್ಪು ಚುಕ್ಕೆ’ ತರುವಂತದ್ದು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಿಯಾಂಕ ಗಾಂಧಿ, ಪ್ರಧಾನಿಗೆ ಸದನಕ್ಕೆ ಬರುವ ಧೈರ್ಯವಿರಲಿಲ್ಲ. ಹಾಗಾಗಿ ಸರ್ಕಾರ ಸ್ಪೀಕರ್ ಮೂಲಕ ಇದನ್ನೆಲ್ಲಾ ಹೇಳಿಸುತ್ತಿದೆ ಎಂದು ಆರೋಪಿಸಿದರು.

‘ಸ್ಪೀಕರ್ ಹೇಳಿಕೆ ಸಂಪೂರ್ಣ ಸುಳ್ಳು. ಸದನದಲ್ಲಿ ಪ್ರಧಾನಿಯವರ ಮೇಲೆ ಯಾರಾದರೂ ಕೈ ಎತ್ತಲು, ಅವರಿಗೆ ನೋವುಂಟು ಮಾಡಲು ಪ್ರಯತ್ನಿಸಲು ಸಾಧ್ಯವೇ? ಆ ರೀತಿಯ ಯಾವುದೇ ಯೋಜನೆ ವಿಪಕ್ಷದ ಸದಸ್ಯರಲ್ಲಿ ಇರಲಿಲ್ಲ. ಅದಾಗ್ಯೂ, ಆ ರೀತಿಯ ಯೋಜನೆ ಇತ್ತು ಎಂದು ಯಾರೇ ಹೇಳಿದರೂ, ಅದು ಸಂಪೂರ್ಣ ತಪ್ಪು ಹೇಳಿಕೆ’ ಎಂದು ಪ್ರಿಯಕಾ ಗಾಂಧಿ ಸಂಸತ್ ಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನೀವು, ನಿಮ್ಮ ಸದಸ್ಯರಿಗೆ ಪುಸ್ತಕಗಳನ್ನು ಉಲ್ಲೇಖಿಸಲು, ಅಸಂಬದ್ಧವಾಗಿ ಮಾತನಾಡಲು ಅವಕಾಶ ನೀಡಿದರೆ, ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಾರೆ. ಪ್ರಧಾನಿಯವರು ಸ್ಪೀಕರ್ ಹಿಂದೆ ಅಡಗಿಕೊಂಡಿದ್ದಾರೆ. ನಿನ್ನೆ ಮೋದಿಯವರಿಗೆ ಸದನಕ್ಕೆ ಬರುವ ಧೈರ್ಯ ಇಲ್ಲವಾದ್ದರಿಂದ ಅವರು ಸ್ಪೀಕರ್ ಮೂಲಕ ಇದನ್ನೆಲ್ಲಾ ಹೇಳಿಸುತ್ತಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಸರ್ಕಾರವನ್ನು ಕೇಳಬೇಕು ಎಂದು ಅವರು ಮಾಧ್ಯಮಗಳಿಗೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.