ADVERTISEMENT

ಟೂಲ್‌ಕಿಟ್‌ ಸಭೆಯ ಮಾಹಿತಿ ಕೊಡಿ: ಝೂಮ್‌ಗೆ ಪೊಲೀಸರ ಕೋರಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 22:03 IST
Last Updated 16 ಫೆಬ್ರುವರಿ 2021, 22:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಖಾಲಿಸ್ತಾನಪರ ಹೋರಾಟದ ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್ (ಪಿಜೆಎಫ್‌)‌ ಟೂಲ್‌ಕಿಟ್‌ ರಚನೆಗೆ ಸಂಬಂಧಿಸಿ ಜನವರಿ 11ರಂದು ಆಯೋಜಿಸಿದ್ದ ಸಭೆಯ ಮಾಹಿತಿ ನೀಡುವಂತೆ ವಿಡಿಯೊ ಕಾನ್ಫರೆನ್ಸ್‌ ವೇದಿಕೆ ‘ಝೂಮ್‌’ಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದಾರೆ.

ಟೂಲ್‌ಕಿಟ್‌ ರಚನೆಗೆ ಆರೋಪಿಗಳು ಹಣ ಪಡೆದುಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಹಾಗೆಯೇ, ಕಳೆದ ಡಿಸೆಂಬರ್‌ನಲ್ಲಿ ರಚಿಸಲಾದ ‘ಇಂಟರ್‌ನ್ಯಾಷನಲ್‌ ಪಾರ್ಮರ್ಸ್‌ ಸ್ಟ್ರೈಕ್‌’ ಎಂಬ ವಾಟ್ಸ್‌ಆ್ಯಪ್‌ ಗುಂಪಿನ ಬಗ್ಗೆಯೂ ಪೊಲೀಸರು ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ.

ಟೂಲ್‌ಕಿಟ್‌ ರಚಿಸಿದ ಮುಂಬೈನ ವಕೀಲೆ ನಿಕಿತಾ ಜೇಕಬ್‌ ಮತ್ತು ಪುಣೆಯ ಎಂಜಿನಿಯರ್‌ ಶಾಂತನು ಮುಲುಕ್‌ ಅವರು ಜ.11ರ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಸಭೆಯಲ್ಲಿ ಭಾಗಿಯಾದ ಎಲ್ಲ 60–70 ವ್ಯಕ್ತಿಗಳ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

ADVERTISEMENT

ಬೆಂಗಳೂರಿನ ದಿಶಾ ರವಿ, ನಿಕಿತಾ ಮತ್ತು ಶಾಂತರು ಅವರು ಒಟ್ಟಾಗಿ ಟೂಲ್‌ಕಿಟ್‌ ರಚಿಸಿ, ಅದನ್ನು ಹಂಚಿಕೊಂಡಿದ್ದಾರೆ. ಸ್ವೀಡನ್‌ನಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಅವರೊಂದಿಗೆ ದಿಶಾಅವರು ಈ ಟೂಲ್‌ಕಿಟ್‌ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ತಮ್ಮ ವಿರುದ್ಧ ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಹಾಗಾಗಿ, ಟೂಲ್‌ಕಿಟ್‌ ಇದ್ದ ಪೋಸ್ಟ್‌ ಅನ್ನು ಅಳಿಸಿ ಹಾಕುವಂತೆ ನಿಕಿತಾ ಅವರು ಗ್ರೇಟಾ ಅವರನ್ನು ಕೋರಿದ್ದರು. ದಿಶಾ ಅವರ ಕೋರಿಕೆಯಂತೆ ಗ್ರೇಟಾ ತಮ್ಮ ಪೋಸ್ಟ್‌ ಅಳಿಸಿ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.