ADVERTISEMENT

ಪುಣೆ: ಭದ್ರತಾ ತಪಾಸಣೆ ವಿಳಂಬ; ವಿಮಾನ ಮಿಸ್ ಮಾಡಿಕೊಂಡ 6 ಶೂಟರ್‌ಗಳು

ಪಿಟಿಐ
Published 17 ಸೆಪ್ಟೆಂಬರ್ 2025, 7:10 IST
Last Updated 17 ಸೆಪ್ಟೆಂಬರ್ 2025, 7:10 IST
<div class="paragraphs"><p>ಆಕಾಸಾ ಏರ್ ವಿಮಾನ</p></div>

ಆಕಾಸಾ ಏರ್ ವಿಮಾನ

   REUTERS/Francis Mascarenhas

ಪುಣೆ: 12ನೇ ಪಶ್ಚಿಮ ವಲಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಗೋವಾಕ್ಕೆ ಹೊರಡಲು ಸಿದ್ಧರಾಗಿದ್ದ ಪುಣೆಯ 6 ಮಂದಿ ರೈಫಲ್ ಮತ್ತು ಪಿಸ್ತೂಲ್ ಶೂಟರ್‌ಗಳು ಪುಣೆಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಉಂಟಾದ ವಿಳಂಬದಿಂದಾಗಿ ವಿಮಾನ ತಪ್ಪಿಸಿಕೊಂಡಿದ್ದಾರೆ.

18 ವರ್ಷದೊಳಗಿನ ಶೂಟರ್‌ಗಳು ಇಂದು (ಬುಧವಾರ) ಬೆಳಿಗ್ಗೆ ಗೋವಾದಲ್ಲಿ ನಡೆಯಲಿರುವ 12ನೇ ಪಶ್ಚಿಮ ವಲಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಮಂಗಳವಾರ ಆಕಾಸಾ ಏರ್ ವಿಮಾನದಲ್ಲಿ ಹೊರಡಲು ನಿಗದಿಯಾಗಿತ್ತು. ಆದರೆ, ಭದ್ರತಾ ತಪಾಸಣೆ ಸಂದರ್ಭದಲ್ಲಿ ಸ್ಪರ್ಧಿಗಳ ಜೊತೆಗಿದ್ದ ಮದ್ದುಗುಂಡುಗಳು ಹಾಗೂ ಪಿಸ್ತೂಲ್‌ಗಳ ತಪಾಸಣೆ ವಿಳಂಬಗೊಂಡಿದ್ದರಿಂದ ಪ್ರಯಾಣ ತಪ್ಪಿಸಿಕೊಂಡಿದ್ದಾರೆ.

ADVERTISEMENT

ಘಟನೆಗೆ ಪ್ರತಿಕ್ರಿಯಿಸಿದ ಆಕಾಸಾ ಏರ್, ವಿಶೇಷ ಶೂಟಿಂಗ್ ಉಪಕರಣಗಳನ್ನು ಒಳಗೊಂಡಿರುವ ಅವರ ಕಿಟ್‌ಗಳನ್ನು ಒಳಗೊಂಡ ವಿಸ್ತೃತ ಭದ್ರತಾ ಕಾರ್ಯವಿಧಾನಗಳಿಂದಾಗಿ ಶೂಟರ್‌ಗಳು ವಿಮಾನ ಹತ್ತಲು ಸಾಧ್ಯವಾಗಲಿಲ್ಲ. ಆದರೆ ಆನ್ ಗ್ರೌಂಡ್ ತಂಡಗಳು ಅಗತ್ಯ ಸಹಾಯವನ್ನು ನೀಡುತ್ತಿವೆ ಮತ್ತು ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ.

ಈ ಕ್ರೀಡಾಪಟುಗಳು ಒಲಿಂಪಿಯನ್ ಗಗನ್ ನಾರಂಗ್ ಸ್ಥಾಪಿಸಿದ ಶೂಟಿಂಗ್ ಅಕಾಡೆಮಿ 'ಗನ್ ಫಾರ್ ಗ್ಲೋರಿ'ಆಕಾಡೆಮಿಯಿಂದ ಬಂದವರಾಗಿದ್ದಾರೆ. ಮಂಗಳವಾರ ಸಂಜೆ 5.30 ಕ್ಕೆ ವಿಮಾನ ಹೊರಡಬೇಕಿತ್ತು. 7 ಶೂಟರ್‌ಗಳು ಮತ್ತು ನಾಲ್ವರು ಕುಟುಂಬ ಸದಸ್ಯರು ಮಧ್ಯಾಹ್ನ 2.30 ರಿಂದ 3.30 ರ ನಡುವೆ ವಿಮಾನ ನಿಲ್ದಾಣವನ್ನು ತಲುಪಿದರು ಎಂದು ಶೂಟರ್ ಒಬ್ಬರ ಪೋಷಕರಾದ ಅತುಲ್ ಕ್ಷೀರಸಾಗರ್ ಎಂಬುವವರು ಹೇಳಿದರು.

ವಿಮಾನ ನಿಲ್ದಾಣದ ಸಿಬ್ಬಂದಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ತೆರವುಗೊಳಿಸಲು ಸಂಜೆ 5 ಗಂಟೆಯವರೆಗೆ ವಿಳಂಬ ಮಾಡಿದರು. ಶೂಟರ್‌ಗಳು ತಮ್ಮೊಂದಿಗೆ ಮದ್ದುಗುಂಡುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದರು ಹಾಗಾಗಿ ಶೂಟರ್‌ಗಳಿಗೆ ವಿಮಾನ ಮಿಸ್ ಆಗಿದೆ ಎಂದರು. ವಿಮಾನ ಪ್ರಯಾಣದ ನಿಯಮಗಳ ಪ್ರಕಾರ, ಯಾವುದೇ ಶೂಟರ್ ಬಂದೂಕು ಮತ್ತು ಮದ್ದುಗುಂಡುಗಳನ್ನು ಒಟ್ಟಿಗೆ ಕೊಂಡೊಯ್ಯುವಂತಿಲ್ಲ. ಬದಲಾಗಿ, ಎರಡನ್ನೂ ಪ್ರತ್ಯೇಕವಾಗಿ ಪ್ಯಾಕ್ ಮಾಡಿಕೊಂಡು ಹೋಗಬೇಕು. ಮತ್ತು ಕ್ಲಿಯರೆನ್ಸ್ ಸಮಯದಲ್ಲಿ, ವಿಮಾನಯಾನ ಸಂಸ್ಥೆಯು ಶೂಟಿಂಗ್ ಕಿಟ್ ಅನ್ನು ವಶಕ್ಕೆ ಪಡೆದುಕೊಳ್ಳುತ್ತದೆ. ಬಳಿಕ ಅವರ ಪ್ರಯಾಣ ಮುಕ್ತಾಯದ ಸಮಯದಲ್ಲಿ ಅವುಗಳನ್ನು ಹಿಂತಿರುಗಿಸುತ್ತದೆ.

ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಹೊರಟಿದ್ದ 7 ಮಂದಿಯ ಪೈಕಿ ಓರ್ವ ಮಹಿಳಾ ಶೂಟರ್ ಕಿಟ್ ಇಲ್ಲದೆ ವಿಮಾನ ಏರುವಲ್ಲಿ ಯಶಸ್ವಿಯಾದರು. ಆದರೆ ಉಳಿದ ಆರು ಮಂದಿಯನ್ನು ತಪಾಸಣೆಯಲ್ಲಿ ತಡೆಹಿಡಿಯಲಾಯಿತು ಮತ್ತು 6 ಮಂದಿಯನ್ನು ಅಲ್ಲಿಯೇ ಬಿಟ್ಟು ವಿಮಾನ ಹೊರಟು ಹೋಯಿತು.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಗನ್ ಫಾರ್ ಗ್ಲೋರಿ ಅಕಾಡೆಮಿ ಘಟನೆಯ ಕುರಿತು ನಿರಾಸೆ ವ್ಯಕ್ತಪಡಿಸಿದೆ. ‘ಆಕಾಸಾ ಏರ್‌ನಿಂದ ತುಂಬಾ ನಿರಾಶಾದಾಯಕ ಸೇವೆ. 12ನೇ ಪಶ್ಚಿಮ ವಲಯ ಶೂಟಿಂಗ್ ಚಾಂಪಿಯನ್‌ಶಿಪ್‌ಗಾಗಿ ಪುಣೆಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ನಮ್ಮ ಕ್ರೀಡಾಪಟುಗಳು ರೈಫಲ್‌ ಮತ್ತು ಪಿಸ್ತೂಲ್‌ಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ 3.5 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣವನ್ನು ತಲುಪಿದ್ದರು. ಆದರೂ, ಸುಗಮ ಸೌಲಭ್ಯದ ಬದಲು ಸಿಬ್ಬಂದಿ ಪ್ರಕ್ರಿಯೆಯನ್ನು ವಿಳಂಬ ಮಾಡಿದರು. ಕೌಂಟರ್‌ನಲ್ಲಿ ಸಹಕರಿಸಲಿಲ್ಲ ಹಾಗಾಗಿ ನಮ್ಮ ಕ್ರೀಡಾಪಟುಗಳು, ತರಬೇತುದಾರರು ಮತ್ತು ಪೋಷಕರಿಗೆ ಬೋರ್ಡಿಂಗ್ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

ಪುಣೆ ವಿಮಾನ ನಿಲ್ದಾಣದಲ್ಲಿ ಆಕಾಸಾ ಏರ್ ಸಿಬ್ಬಂದಿ ಸರಿಯಾದ ತಪಾಸಣೆಯ ಹೊರತಾಗಿಯೂ ವಿಮಾನ ಹತ್ತಿದ ಓರ್ವ ಕ್ರೀಡಾಪಟುವಿನ ರೈಫಲ್ ಅನ್ನು ತಡೆಹಿಡಿದಿದ್ದಾರೆ ಎಂದು ಶೂಟಿಂಗ್ ಅಕಾಡೆಮಿ ಆರೋಪಿಸಿದೆ. ಚಾಂಪಿಯನ್‌ಶಿಪ್ ಇಂದು (ಬುಧವಾರ) ಆರಂಭವಾಗಲಿದ್ದು, ಈ ನಿರ್ಲಕ್ಷ್ಯದಿಂದಾಗಿ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅವರ ಭಾಗವಹಿಸುವಿಕೆ ಮತ್ತು ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದಕ್ಕೆ ಯಾರು ಹೊಣೆ ಹೊರುತ್ತಾರೆ? ಎಂದು ಅಕಾಡೆಮಿ ಪ್ರಶ್ನಿಸಿದೆ.

6 ಶೂಟರ್‌ಗಳು ಬುಧವಾರ ಮುಂಜಾನೆ ಮತ್ತೊಂದು ವಿಮಾನಯಾನ ಸಂಸ್ಥೆಯ ಮೂಲಕ ಗೋವಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ಕ್ಷೀರಸಾಗರ್ ಹೇಳಿದರು. ಆದರೆ ಮಂಗಳವಾರ ಸಂಜೆಯವರೆಗೂ ಕೂಡ ಐವರು ಶೂಟರ್‌ಗಳು ಮತ್ತು ಅವರ ಕುಟುಂಬ ಸದಸ್ಯರು ವಿಮಾನ ನಿಲ್ದಾಣದಲ್ಲಿಯೇ ಇದ್ದರು.

ಗನ್ ಫಾರ್ ಗ್ಲೋರಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಕಾಸಾ ಏರ್, ಸೆ. 16ರಂದು ಪುಣೆಯಿಂದ ಗೋವಾಕ್ಕೆ ಅಕಾಸಾ ಏರ್ ವಿಮಾನ QP 1143 ನಲ್ಲಿ ಬುಕ್ ಮಾಡಿದ್ದ ವೃತ್ತಿಪರ ರೈಫಲ್ ಶೂಟರ್‌ಗಳ ತಂಡವು ವಿಷಾದಕರವಾಗಿ ವಿಶೇಷ ಶೂಟಿಂಗ್ ಉಪಕರಣಗಳನ್ನು ಒಳಗೊಂಡಿದ್ದರಿಂದ ಭದ್ರತಾ ಕಾರ್ಯವಿಧಾನಗಳಿಂದಾಗಿ ಅವರಿಗೆ ವಿಮಾನ ಹತ್ತಲು ಸಾಧ್ಯವಾಗಲಿಲ್ಲ ಎಂದು ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.