ಪೋಶೆ ಕಾರು ಅಪಘಾತ
ಪಿಟಿಐ ಚಿತ್ರ
ಪುಣೆ (ಮಹಾರಾಷ್ಟ್ರ): ಭಾರಿ ವಿವಾದಕ್ಕೆ ಕಾರಣವಾಗಿದ್ದ ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ ಬಾಲಕನ ತಾಯಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಾಲ್ಕು ದಿನಗಳ ನಂತರ ಅವರು ಇಂದು (ಶನಿವಾರ) ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ರಕ್ತದ ಮಾದರಿ ಬದಲಾಯಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ 10 ಆರೋಪಿಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮೊದಲ ವ್ಯಕ್ತಿ ಅವರು.
ಆರೋಪಿ ಬಾಲಕನ ತಂದೆಯ ಆಮಿಷಕ್ಕೆ ಮಣಿದಿದ್ದ ವೈದ್ಯರು, ಪೊಲೀಸರು ಸಂಗ್ರಹಿಸಿದ್ದ ಬಾಲಕನ ರಕ್ತದ ಮಾದರಿಯನ್ನು ಕಸದಬುಟ್ಟಿಗೆ ಎಸೆದು, ಅದರ ಜಾಗದಲ್ಲಿ ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಿದ್ದರು. ರಕ್ತದ ಮಾದರಿಯನ್ನು ಈ ರೀತಿ ಬದಲಾಯಿಸಿ, ಬಾಲಕ ಕಾರು ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯ ಕುಡಿದಿರಲಿಲ್ಲ ಎಂದು ತೋರಿಸುವ ಯತ್ನ ನಡೆಸಲಾಗಿತ್ತು.
ರಕ್ತದ ಮಾದರಿ ಬದಲಿಸಿದ್ದ ಆರೋಪದ ಮೇಲೆ ಬಾಲಕನ ತಾಯಿಯನ್ನು 2024ರ ಜೂನ್ 1ರಂದು ಪೊಲೀಸರು ಬಂಧಿಸಿದ್ದರು.
ಪ್ರಕರಣ ಸಂಬಂಧ ಬಂಧನದಲ್ಲಿರುವ ಇತರರಲ್ಲಿ ಬಾಲಕನ ತಂದೆ, ಸಾಸೂನ್ ಆಸ್ಪತ್ರೆಯ ವೈದ್ಯರಾದ ಅಜಯ್ ತಾವರೆ ಮತ್ತು ಶ್ರೀಹರಿ ಹಾಲನೂರ್, ಆಸ್ಪತ್ರೆಯ ಸಿಬ್ಬಂದಿ ಅತುಲ್ ಘಟ್ಕಾಂಬಳೆ, ಇಬ್ಬರು ಮಧ್ಯವರ್ತಿಗಳು ಮತ್ತು ಇತರ ಮೂವರು ಸೇರಿದ್ದಾರೆ.
2024ರ ಮೇ 19ರಂದು ಕಲ್ಯಾಣಿ ನಗರದಲ್ಲಿ ಪಾನಮತ್ತ ಬಾಲಕನು ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿಹೊಡೆದು ಇಬ್ಬರು ಟೆಕಿಗಳು ಮೃತಪಟ್ಟಿದ್ದರು.
ಸದ್ಯ ಆರೋಪಿತ ಬಾಲಕನ ತಾಯಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್, ಜಾಮೀನು ಷರತ್ತುಗಳನ್ನು ವಿಧಿಸುವಂತೆ ಪುಣೆ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.