ADVERTISEMENT

ಕೃಷಿ ಕಾನೂನು ವಿರುದ್ಧದ ಪಂಜಾಬ್‌ ಮಸೂದೆ ವಿಚಾರವಾಗಿ ಎಎಪಿ ಅಹೋರಾತ್ರಿ ಧರಣಿ

ಏಜೆನ್ಸೀಸ್
Published 20 ಅಕ್ಟೋಬರ್ 2020, 5:24 IST
Last Updated 20 ಅಕ್ಟೋಬರ್ 2020, 5:24 IST
   

ಚಂಡೀಗಡ: ಕೇಂದ್ರದ ಕೃಷಿಗೆ ಕಾನೂನುಗಳಿಗೆ ಪ್ರತಿಯಾಗಿ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರ ರೂಪಿಸುತ್ತಿರುವ ಮಸೂದೆಯ ಪ್ರತಿಯನ್ನು ವಿರೋಧಪಕ್ಷಗಳಿಗೆ ಪೂರೈಸದೇ ಇರುವುದನ್ನು ಖಂಡಿಸಿ ಆಮ್‌ ಆದ್ಮಿ ಪಕ್ಷದ ಶಾಸಕರು ಸೋಮವಾರ ರಾತ್ರಿ ವಿಧಾನಸಭೆಯಲ್ಲಿಯೇ ಧರಣಿ ನಡೆಸಿದರು.

ಕೇಂದ್ರ ಕೃಷಿ ಕಾನೂನುಗಳಿಗೆ ಪ್ರತಿಯಾಗಿ ಪಂಜಾಬ್‌ ಸರ್ಕಾರ ಪ್ರತ್ಯೇಕ ಕೃಷಿ ಮಸೂದೆ ಮಂಡಿಸುತ್ತಿದ್ದು ಅದಕ್ಕಾಗಿ ಎರಡು ದಿನಗಳ ವಿಧಾನಸಭೆ ವಿಶೇಷ ಅಧಿವೇಶನ ಕರೆಯಲಾಗಿದೆ. ಅಧಿವೇಶನದ ಮೊದಲ ದಿನವಾದ ಸೋಮವಾರವೇ ಮಸೂದೆ ಮಂಡಿಸದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ನಡೆ ವಿರುದ್ಧ ಎಎಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದುವರಿದು, ವಿಧಾನಸಭೆಯಲ್ಲಿಯೇ ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಮಂಡಿಸುತ್ತಿರುವ ಮಸೂದೆಯ ಅಂಶಗಳನ್ನು ಪರಿಶೀಲಿಸಲು ವಿರೋಧ ಪಕ್ಷಗಳಿಗೆ ಮಸೂದೆಯ ಪ್ರತಿಗಳನ್ನು ನೀಡಬೇಕು ಎಂದು ಆಮ್‌ ಆದ್ಮಿ ಪಕ್ಷದ ನಾಯಕರು ಒತ್ತಾಯಿಸಿದರು.

ADVERTISEMENT

ಈ ಕುರಿತು ಮಾತನಾಡಿರುವ ವಿರೋಧ ಪಕ್ಷದ ನಾಯಕ, ಎಎಪಿ ಶಾಸಕ ಹರ್‌ಪಲ್‌ ಚೀಮಾ, ‘ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಮಸೂದೆಯನ್ನು ಎಎಪಿ ಬೆಂಬಲಿಸುತ್ತದೆ. ಆದರೆ, ಸರ್ಕಾರವು ಅದರ ಪ್ರತಿಗಳನ್ನು ನಮಗೆ ಒದಗಿಸಬೇಕು. ಇತರ ಮಸೂದೆಗಳ ಪ್ರತಿಗಳೂ ನಮಗೆ ಸಿಕ್ಕಿಲ್ಲ. ಮಸೂದೆಯ ಪ್ರತಿ ಸಿಗದೇ ಅದರ ಕುರಿತು ಚರ್ಚೆ ಮಾಡುವುದಾದರೂ ಹೇಗೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಮಸೂದೆಯನ್ನು ಸೋಮವಾರವೇ ವಿಧಾನಸಭೆಯಲ್ಲಿ ಮಂಡಿಸಬೇಕಾಗಿತ್ತು ಎಂದು ಶಿರೋಮಣಿ ಅಕಾಲಿದಳ ಅಭಿಪ್ರಾಯಪಟ್ಟಿದೆ.

ರಾಜ್ಯದ ಕಾನೂನುಗಳ ಗರಿಷ್ಠ ಮಟ್ಟದ ಪ್ರಯೋಜನ ಪಡೆಯುವ ಮೂಲಕ ಕೇಂದ್ರದ ಕೃಷಿ ಕಾನೂನುಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಪಂಜಾಬ್‌ ಸರ್ಕಾರ ಪ್ರಯತ್ನಗಳನ್ನು ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದ ಮಸೂದೆ ಮಂಡಿಸಲಿಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದ್ದು, ಮಂಗಳವಾರ ಮಸೂದೆ ಮಂಡನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.