ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪಂಜಾಬ್‌ನಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಪ್ರವಾಹದ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಘೋಷಿಸಿದ ₹1,600 ಕೋಟಿ ಪರಿಹಾರವು ಪಂಜಾಬ್ ಜನರಿಗೆ ಮಾಡಿದ ಅತಿದೊಡ್ಡ ಅನ್ಯಾಯ ಎಂದು ರಾಹುಲ್ ಆರೋಪಿಸಿದ್ದಾರೆ.
ಭೀಕರ ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯವು ಸುಮಾರು ₹20,000 ಕೋಟಿ ನಷ್ಟ ಅನುಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್‌ಗೆ ತ್ವರಿತವಾಗಿ ಹಾಗೂ ಸಮಗ್ರವಾದ ಪರಿಹಾರದ ಪ್ಯಾಕೇಜ್ ಅನ್ನು ಒದಗಿಸಬೇಕು ಎಂದು ರಾಹುಲ್ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಅತ್ಯಂತ ವಿನಾಶಕಾರಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸ್ವತಃ ನಾವು ಅದನ್ನು ವೀಕ್ಷಿಸಿದ್ದೇವೆ. ಸಂತ್ರಸ್ತರ ಜತೆ ಸಂವಾದ ನಡೆಸಿದ್ದೇವೆ ಎಂದಿದ್ದಾರೆ.
4 ಲಕ್ಷಕ್ಕೂ ಅಧಿಕ ಎಕರೆಯ ಭತ್ತದ ಬೆಳೆ ನಾಶವಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ಲಕ್ಷಾಂತರ ಜನರು ನಿರಾಶಿತ್ರರಾಗಿದ್ದಾರೆ ಎಂದು ಪಂಜಾಬ್ ಭೇಟಿಯ ಸಮಯದಲ್ಲಿ ತಾವು ಕಂಡ ಭೀಕರ ದೃಶ್ಯಗಳ ಬಗ್ಗೆ ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಂಜಾಬ್ ಮತ್ತೆ ಸಹಜ ಸ್ಥಿತಿಗೆ ಮರಳಬೇಕು. ಅವರ ಸಂಕಷ್ಟದ ಸಮಯದಲ್ಲಿ, ಭಾರತವು ನಿಮ್ಮೊಂದಿಗೆ ನಿಂತಿದೆ ಎಂದು ಪಂಜಾಬ್‌ನ ಪ್ರತಿಯೊಂದು ಕುಟುಂಬಕ್ಕೂ ನಾವು ಭರವಸೆ ನೀಡಬೇಕು. ಅವರ ಭವಿಷ್ಯವನ್ನು ಪುನರ್ನಿರ್ಮಿಸಲು ಒಗ್ಗೂಡಿ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಬೇಕು ಎಂದು ರಾಹುಲ್ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಸುಮಾರು 3,200 ಶಾಲೆಗಳು ಹಾನಿಗೊಳಗಾಗಿವೆ. 56 ಜನರು ಮೃತಪಟ್ಟಿದ್ದಾರೆ. 1,400 ಚಿಕಿತ್ಸಾಲಯಗಳು, ಸರ್ಕಾರಿ ಕಟ್ಟಡಗಳು ಮತ್ತು 19 ಕಾಲೇಜುಗಳು ತೀವ್ರ ಹಾನಿಗೊಳಗಾಗಿವೆ. 8,500 ಕಿ.ಮೀ ರಸ್ತೆಗಳು ಮತ್ತು 2,500 ಸೇತುವೆಗಳು ನಾಶವಾಗಿವೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.