
ಚಂಡೀಗಢ: ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಸೋಮವಾರ ‘ಮೇರಿ ರಸೋಯಿ’ ಯೋಜನೆಗೆ ಅಧಿಕೃತ ಚಾಲನೆ ನೀಡಿರುವುದಾಗಿ ಘೋಷಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನೋಂದಣಿಯಾಗಿರುವ 40 ಲಕ್ಷ ಕುಟುಂಬಗಳಿಗೆ ‘ಮೇರಿ ರಸೋಯಿ’ ಯೋಜನೆ ಅಡಿಯಲ್ಲಿ ಅಗತ್ಯ ಆಹಾರ ಕಿಟ್ ಪೂರೈಸುವುದಾಗಿ ಘೋಷಿಸಿದೆ.
ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾನ್ ಮಾತನಾಡಿ, ‘ಬಡಕುಟುಂಬದ ಮಕ್ಕಳಿಗೂ ಸಮರ್ಪಕ ಪೋಷಕಾಂಶ ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಈ ಬಡ ಕುಟುಂಬಗಳಿಗೆ ಸಬ್ಸಿಡಿ ಆಧಾರದಲ್ಲಿ ಗೋಧಿ ಒದಗಿಸಲಾಗುತ್ತಿದೆ. ಈಗ ಹೊಸ ಯೋಜನೆ ಅನ್ವಯ 2 ಕೆ.ಜಿ. ದ್ವಿದಳ ಧಾನ್ಯ, 2 ಕೆ.ಜಿ. ಸಕ್ಕರೆ, 1 ಕೆ.ಜಿ. ಅಯೋಡಿನ್‌ಭರಿತ ಉಪ್ಪು, 200 ಗ್ರಾಂ ಅರಿಶಿಣ ಪುಡಿ ಹಾಗೂ ಒಂದು ಲೀಟರ್ ಸಾಸಿವೆ ಎಣ್ಣೆಯನ್ನು ಒಳಗೊಂಡ ಕಿಟ್ ತಯಾರಿಸಿ ನೀಡಲಾಗುವುದು’ ಎಂದಿದ್ದಾರೆ.
ತ್ರೈಮಾಸಿಕ ಆಧಾರದಲ್ಲಿ ಕಿಟ್‌ಗಳನ್ನು ಪೂರೈಸಲಾಗುತ್ತದೆ. ಏಪ್ರಿಲ್‌ನಿಂದ ಮೊದಲ ಸುತ್ತು ಆರಂಭವಾಗಲಿದೆ. ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.