ADVERTISEMENT

107 ವರ್ಷ ಪೂರೈಸಿದ ‘ಪಂಜಾಬ್‌ ಮೇಲ್‌’

ಏಜೆನ್ಸೀಸ್
Published 3 ಜೂನ್ 2019, 2:39 IST
Last Updated 3 ಜೂನ್ 2019, 2:39 IST
   

ಮುಂಬೈ:ದೇಶದ ಅತ್ಯಂತ ಹಳೇಯ, ದೂರದ ಪ್ರಯಾಣ ಮಾಡಿದ ರೈಲುಗಳಲ್ಲಿ ಒಂದಾದ ‘ಪಂಜಾಬ್‌ ಮೇಲ್‌’ 107 ವರ್ಷ ಪೂರ್ಣಗೊಳಿಸಿದೆ. ಈ ರೈಲಿನ 107ನೇ ವರ್ಷಾಚರಣೆ ಮಾಡಿರುವ ಪ್ರಯಾಣಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಈ ರೈಲನ್ನು ಆರಂಭದಲ್ಲಿ ‘ಪಂಜಾಬ್‌ ಲಿಮಿಟೆಡ್‌’ ಎಂದು ಕರೆಯಲಾಗುತ್ತಿತ್ತು. ಇದು 1912ರ ಜೂನ್‌ 1ರಂದು ಮುಂಬೈನಿಂದ ಪಾಕಿಸ್ತಾನದ ಪೇಶಾವರ್‌ಗೆ ಮೊದಲ ಪ್ರಯಾಣ ಮಾಡಿತ್ತು.

ಪ್ರಾರಂಭದಲ್ಲಿ ಉನ್ನತ ಸ್ಥಾನದಲ್ಲಿದ್ದವರಿಗೆ ಪ್ರಯಾಣಿಸಲು ಅವಕಾಶವಿತ್ತು. ನಂತರದ ದಿನಗಳಲ್ಲಿ ಸಾಮಾನ್ಯ ಜನರಿಗೂ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

1930ರ ದಶಕದ ಮಧ್ಯದಲ್ಲಿ ಮೂರನೇ ಶ್ರೇಣಿಯ ಬೋಗಿಗಳನ್ನು ರೈಲಿಗೆ ಅಳವಡಿಸಲಾಯಿತು. 1945ರಲ್ಲಿ ಹವಾನಿಯಂತ್ರಿತ ಬೋಗಿ ಅಳವಡಿಕೆಯಾದವು. ಬ್ರಿಟಿಷ್‌ ಆಡಳಿತ ಕಾಲದ ಅತಿ ವೇಗದ ರೈಲು ಇದಾಗಿತ್ತು.

ಪಂಜಾಬ್‌ ಮೇಲ್‌ 107 ವರ್ಷ ಪೂರೈಸಿದ ಸಂದರ್ಭದಲ್ಲಿ ಪ್ರಯಾಣಿಕರು ಸಂಭ್ರಮಾಚರಣೆ ಮಾಡಿರುವುದನ್ನು ಎಎನ್‌ಐ ಟ್ವೀಟ್‌ ಮಾಡಿದೆ.

ದೇಶ ವಿಭಜನೆಯಾಗುವ ಮೊದಲು ಈ ರೈಲು ಮುಂಬೈನಲ್ಲಿರುವ ಬಲ್ಲಾರ್ಡ್‌ ಪಿಯರ್‌ ಮೋಲ್ ನಿಲ್ದಾಣದಿಂದ ಪೇಶಾವರ್‌ಗೆ 47 ಗಂಟೆಗಳಲ್ಲಿ 2,496 ಕಿ.ಮೀ. ದೂರ ಕ್ರಮಿಸುತ್ತಿತ್ತು.

ಪ್ರಸ್ತುತ ರೈಲು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‌ನಿಂದ ಪ್ರಯಾಣ ಆರಂಭಿಸಿ ಉತ್ತರದ ಫಿರೋಜ್ಪುರ್‌ ಕಂಟೋನ್ಮೆಂಟ್‌ನಲ್ಲಿ ಕೊನೆಗೊಳಿಸುತ್ತದೆ. 34 ಗಂಟೆ 15 ನಿಮಿಷದಲ್ಲಿ 1,930 ಕಿ.ಮೀ. ದೂರ ಕ್ರಮಿಸುತ್ತದೆ.

ರೈಲು ಆರು ಬೋಗಿಗಳನ್ನು ಹೊಂದಿತ್ತು. ಅದರಲ್ಲಿ ಪ್ರಯಾಣಿಕರಿಗೆ ಮೂರು ಮತ್ತು ಅಂಚೆ ಸರಕು ಸಾಗಣೆಗೆ ಮೂರು ಬೋಗಿಗಳನ್ನು ಮೀಸಲಿಡಲಾಗಿತ್ತು. ಮೂರು ಬೋಗಿಗಳಲ್ಲಿ 96 ಜನ ಮಾತ್ರ ಪ್ರಯಾಣಿಸಲು ಅವಕಾಶವಿತ್ತು.

ರೈಲಿನಲ್ಲಿ ಶೌಚ ಮತ್ತು ಸ್ನಾನಗೃಹಗಳು, ರೆಸ್ಟೋರೆಂಟ್‌,ಸರಕು ಕೋಣೆ ಹಾಗೂ ಬ್ರಿಟಿಷ್‌ ಪ್ರಯಾಣಿಕರ ಸೇವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.