ADVERTISEMENT

ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವಿಸಿ 21 ಜನರ ಸಾವು

ಪಿಟಿಐ
Published 13 ಮೇ 2025, 4:36 IST
Last Updated 13 ಮೇ 2025, 4:36 IST
<div class="paragraphs"><p>ಅಮೃತಸರದಲ್ಲಿ ನಕಲಿ ಮದ್ಯ ಸೇವಿಸಿ ಸಾವಿಗೀಡಾದವರ ಕುಟುಂಬಗಳನ್ನು ಸೋಮವಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್ ಭೇಟಿಯಾಗಿ ಸಾಂತ್ವನ ಹೇಳಿದರು&nbsp;</p></div>

ಅಮೃತಸರದಲ್ಲಿ ನಕಲಿ ಮದ್ಯ ಸೇವಿಸಿ ಸಾವಿಗೀಡಾದವರ ಕುಟುಂಬಗಳನ್ನು ಸೋಮವಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್ ಭೇಟಿಯಾಗಿ ಸಾಂತ್ವನ ಹೇಳಿದರು 

   

– ಪಿಟಿಐ ಚಿತ್ರ

ಚಂಡೀಗಢ/ಅಮೃತಸರ: ಪಂಜಾಬ್‌ನ ಅಮೃತಸರ ಜಿಲ್ಲೆಯ ಮಜಿತಾ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 21 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಸಾವಿಗೀಡಾದವರಲ್ಲಿ ಬಹುತೇಕರು ದಿನಗೂಲಿ ಕಾರ್ಮಿಕರು. ನಕಲಿ ಮದ್ಯ ಸೇವಿಸಿ ಅಸ್ವಸ್ಥಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.

ದುರಂತಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ.

ಎಥೆನಾಲ್‌ ಬದಲಿಗೆ ಕಡಿಮೆ ಬೆಲೆಯಲ್ಲಿ ಸಿಗುವ ಮೆಥೆನಾಲ್ ಅನ್ನು ಆನ್‌ಲೈನ್‌ ಮೂಲಕ ಖರೀದಿಸಿ ಮದ್ಯ ತಯಾರಿಸಲು ಬಳಸಲಾಗಿತ್ತು. ಇದರಿಂದಲೇ ಜನರ ಸಾವು ಸಂಭವಿಸಿವೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಕಿಂಗ್‌ಪಿನ್‌ ಸಾಹಿಬ್ ಸಿಂಗ್ ಮೆಥೆನಾಲ್‌ ಪೂರೈಕೆ ಮಾಡಿದ್ದರು. ನಿರ್ಲಕ್ಷ್ಯ ಆರೋಪದ ಮೇಲೆ ಡಿಎಸ್‌ಪಿ, ಸಬ್‌ಇನ್ಸ್‌ಪೆಕ್ಟರ್ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್‌ ಅವರು ತಿಳಿಸಿದ್ದಾರೆ. ದುರಂತ ನಡೆದ ಸ್ಥಳಗಳಿಗೆ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.

ದುರಂತ ಸ್ಥಳಕ್ಕೆ ಭೇಟಿ ನೀಡಿದ ನಂತರ ‌‘ಎಕ್ಸ್‌’ ಪೋಸ್ಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ‘ಇವು ಸಾವಲ್ಲ, ಕೊಲೆಗಳು. ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಸರ್ಕಾರ ನಕಲಿ ಮದ್ಯದ ಜಾಲ ಮಟ್ಟಹಾಕುವಲ್ಲಿ ವಿಫಲವಾಗಿದೆ. ದುರಂತದ ಹೊಣೆ ಹೊತ್ತು ಮುಖ್ಯಮಂತ್ರಿ ಭಗವಂತ ಮಾನ್, ಅಬಕಾರಿ ಸಚಿವ ಹರ್ಪಲ್ ಸಿಂಗ್ ಚೀಮಾ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಒಂದು ವರ್ಷದಲ್ಲಿ ಇದು ಪಂಜಾಬ್‌ನ ಎರಡನೇ ದೊಡ್ಡ ಕಳ್ಳಭಟ್ಟಿ ದುರಂತವಾಗಿದೆ. 2024ರ ಮಾರ್ಚ್‌ನಲ್ಲಿ 20 ಜನರು ಸಂಗ್ರೂರ್‌ನಲ್ಲಿ ನಕಲಿ ಮದ್ಯ ಸೇವಿಸಿ ಸಾವಿಗೀಡಾಗಿದ್ದರು. 2020ರಲ್ಲಿ 120 ಮಂದಿ ಜೀವ ಬಿಟ್ಟಿದ್ದರು.

ಮಜಿತಾದ ಡಿಎಸ್ಪಿ ಮತ್ತು ಠಾಣಾಧಿಕಾರಿಯನ್ನು ಅಮಾನತು ಮಾಡಲಾಗಿದ್ದು, ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಜಿಪಿ ಗೌರವ್‌ ಯಾದವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.