ADVERTISEMENT

ಗಣರಾಜ್ಯೋತ್ಸವ ಹಿಂಸಾಚಾರ: ಬಂಧಿತ 83 ಮಂದಿಗೆ ಪಂಜಾಬ್ ಸರ್ಕಾರದಿಂದ ₹2 ಲಕ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2021, 4:43 IST
Last Updated 13 ನವೆಂಬರ್ 2021, 4:43 IST
ಚರಣ್‌ಜಿತ್‌ ಸಿಂಗ್ ಚನ್ನಿ (ಪಿಟಿಐ ಚಿತ್ರ)
ಚರಣ್‌ಜಿತ್‌ ಸಿಂಗ್ ಚನ್ನಿ (ಪಿಟಿಐ ಚಿತ್ರ)   

ಚಂಡೀಗಡ: ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ್‍ಯಾಲಿಯ ಸಂದರ್ಭ ಬಂಧನಕ್ಕೊಳಗಾಗಿರುವ 83 ಮಂದಿಗೆ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಘೋಷಿಸಿದ್ದಾರೆ. ಟ್ರ್ಯಾಕ್ಟರ್ ರ್‍ಯಾಲಿಯ ಸಂದರ್ಭ ದೆಹಲಿಯ ಕೆಂಪು ಕೋಟೆಯಲ್ಲಿ ಹಿಂಸಾಚಾರ ಸಂಭವಿಸಿತ್ತು.

‘ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ನನ್ನ ಸರ್ಕಾರದ ನಿಲುವನ್ನು ಪುನರುಚ್ಚರಿಸುತ್ತಿದ್ದೇನೆ. ಜನವರಿ 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ 83 ಮಂದಿಗೆ ₹2 ಲಕ್ಷ ಪರಿಹಾರ ನೀಡಲು ನಾವು ನಿರ್ಧರಿಸಿದ್ದೇವೆ’ ಎಂದು ಚರಣ್‌ಜಿತ್‌ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದಾರೆ.

ಪಂಜಾಬ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಚನ್ನಿ ಅವರು, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.

‘ನಾವೆಲ್ಲರೂ ಒಟ್ಟಾಗಿ ಪಂಜಾಬ್ ಅನ್ನು ಸಮೃದ್ಧಗೊಳಿಸಬೇಕಾಗಿದೆ. ಪಂಜಾಬ್ ಕೃಷಿ ಪ್ರಧಾನ ರಾಜ್ಯ. ನಮ್ಮದು ಕಾಂಗ್ರೆಸ್ ಸರ್ಕಾರವಾಗಿದ್ದು, ರೈತಪರವಾಗಿದೆ’ ಎಂದು ಚನ್ನಿ ಹೇಳಿದ್ದಾರೆ.

ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ವರ್ಷ ನವೆಂಬರ್ 26ರಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿಯಲ್ಲಿ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆದರೂ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತರ ಪ್ರತಿಭಟನೆ ಮುಂದುವರಿದಿದೆ. ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದಿರುವ ಹಲವು ಸುತ್ತಿನ ಮಾತುಕತೆಗಳೂ ಫಲಪ್ರದವಾಗಿಲ್ಲ.

ಪ್ರತಿಭಟನಾನಿರತ ರೈತರು ಗಣರಾಜ್ಯೋತ್ಸವ ದಿನ ದೆಹಲಿಗೆ ಟ್ರ್ಯಾಕ್ಟರ್ ರ್‍ಯಾಲಿ ಹಮ್ಮಿಕೊಂಡಿದ್ದರು. ರ್‍ಯಾಲಿ ವೇಳೆ ಪ್ರತಿಭಟನಾ ನಿರತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಸಂಭವಿಸಿತ್ತು. ಹಲವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ತಿಹಾರ್ ಜೈಲಿನಲ್ಲಿ ನಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಬಂಧಿತರ ಪೈಕಿ ಕೆಲವರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.