ADVERTISEMENT

ಅಮರಾವತಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರ 2026ರಿಂದ ಕಾರ್ಯಾರಂಭ: CM ನಾಯ್ಡು

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 9:50 IST
Last Updated 30 ಜೂನ್ 2025, 9:50 IST
<div class="paragraphs"><p>ಚಂದ್ರಬಾಬು ನಾಯ್ಡು</p></div>

ಚಂದ್ರಬಾಬು ನಾಯ್ಡು

   

ವಿಜಯವಾಡ: ‘ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ‘ಕ್ವಾಂಟಮ್‌ ಕಂಪ್ಯೂಟಿಂಗ್ ಕೇಂದ್ರ’ವು 2026ರ ಜ. 1ರಿಂದ ಕಾರ್ಯಾರಂಭ ಮಾಡಲಿದೆ’ ಎಂದು ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೋಮವಾರ ತಿಳಿಸಿದ್ದಾರೆ.

ವಿಜಯವಾಡದಲ್ಲಿ ಆಯೋಜನೆಗೊಂಡಿದ್ದ ಅಮರಾವತಿ ಕ್ವಾಂಟಮ್‌ ವ್ಯಾಲಿ ಶಿಬಿರವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ‘ರಾಜ್ಯದ ಕ್ವಾಂಟಮ್‌ ವ್ಯಾಲಿ ಯೋಜನೆಯ ಭಾಗವಾಗಿ ಈ ಕೇಂದ್ರ ಸ್ಥಾಪನೆಯಾಗಲಿದೆ. ಆ ಮೂಲಕ ಈ ಕ್ಷೇತ್ರಕ್ಕೆ ಅಗತ್ಯವಿರುವ ಸದೃಢ ಪರಿಸರವನ್ನು ಸೃಷ್ಟಿಸುವುದು ಮತ್ತು ಅದರ ಬಳಕೆಯ ಮಾರ್ಗವನ್ನು ಸೃಜಿಸುವುದು ಯೋಜನೆಯ ಮೂಲ ಉದ್ದೇವಾಗಿದೆ’ ಎಂದಿದ್ದಾರೆ.

ADVERTISEMENT

‘ತಂತ್ರಜ್ಞಾನ ಜಗತ್ತಿನ ಸದ್ಯದ ಅಗತ್ಯ ಕ್ವಾಂಟಮ್ ಕಂಪ್ಯೂಟಿಂಗ್ ಆಗಿದೆ. 2026ರ ಜ. 1ಕ್ಕೆ ಕಾರ್ಯಾರಂಭ ಮಾಡಲಿರುವ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರದ ಮೂಲಕ ಅಮರಾವತಿಯಲ್ಲಿ ಕ್ವಾಂಟಮ್‌ ವ್ಯಾಲಿ ಸ್ಥಾಪನೆಯಾಗಲಿದೆ. ಆ ಮೂಲಕ ದಕ್ಷಿಣ ಏಷ್ಯಾದ ಮೊದಲ ಕ್ವಾಂಟಮ್‌ ವ್ಯಾಲಿಯನ್ನಾಗಿ ಮತ್ತು ಅಮರಾವತಿಯ ಗ್ರೀನ್‌ಫೀಲ್ಡ್‌ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಉತ್ಸುಕವಾಗಿದೆ’ ಎಂದಿದ್ದಾರೆ.

‘ಅಮರಾವತಿ ಘೋಷಣೆಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್‌ ವ್ಯಾಲಿ ಸ್ಥಾಪನೆಯ ಘೋಷಣೆ ಆಗಲಿದೆ. ಇದಕ್ಕೆ ಯಾವುದೇ ಅಡೆತಡೆ ಬಂದಲ್ಲಿ ಅದನ್ನು ನಾನು ಪರಿಹರಿಸುತ್ತೇನೆ’ ಎಂದು ಹೂಡಿಕೆದಾರರಿಗೆ ನಾಯ್ಡು ಭರವಸೆ ನೀಡಿದರು.

‘ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಆಂಧ್ರಪ್ರದೇಶದ ಮಹತ್ವಾಕಾಂಕ್ಷೆಯ ಕ್ವಾಂಟಮ್‌ ವ್ಯಾಲಿಗೆ ಯಾವುದೇ ಅಡೆತಡೆ ಎದುರಾಗದು. ಕಾರ್ಯಾಗಾರದಲ್ಲಿ ಪಾಲ್ಗೊಂಡು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ವಾಂಟಮ್ ಕಂಪ್ಯೂಟಿಂಗ್‌ ತಜ್ಞರು ಈ ಕೇಂದ್ರದ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಸಾಧ್ಯವಾಗಲಿದ್ದು, ಮುಂದುವರಿಯುವಂತೆ ಸಲಹೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.