ADVERTISEMENT

ರಾಹುಲ್ ಸೇರಿ 25 ಸಂಸದರ ಮನೆಗೆ ನುಗ್ಗಿ ಗುಂಡಿಕ್ಕುವುದಾಗಿ ಬೆದರಿಸಿದ್ದವನ ಬಂಧನ

ಪಿಟಿಐ
Published 19 ಫೆಬ್ರುವರಿ 2026, 11:40 IST
Last Updated 19 ಫೆಬ್ರುವರಿ 2026, 11:40 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರಿಗೆ ಗುಂಡಿಕ್ಕುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಬಲಪಂಥೀಯ ಗುಂಪಿನ ಕರ್ಣಿ ಸೇನಾ ವಕ್ತಾರ ರಾಜ್ ಸಿಂಗ್ ಎಂದು ಗುರುತಿಸಲಾಗಿದೆ.

‘ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ನಿಂದಿಸಿದ ಕಾಂಗ್ರೆಸ್‌ನ 25 ಸಂಸದರ ವಿರುದ್ಧ ಕರ್ಣಿ ಸೇನಾ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದಾರೆ. ಅವರನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ನಾವು ಅವರ ಮನೆಗೆ ನುಗ್ಗಿ ಒಬ್ಬೊಬ್ಬರನ್ನೇ ಗುಂಡಿಕ್ಕಿ ಸಾಯಿಸುತ್ತೇವೆ, ಎಲ್ಲವನ್ನೂ ಧ್ವಂಸಗೊಳಿಸುತ್ತೇವೆ. ರಾಹುಲ್‌ ಗಾಂಧಿ ನೀವೂ ಕೂಡ ಎಚ್ಚರದಿಂದ ಕೇಳಿಸಿಕೊಳ್ಳಿ, ನಿಮ್ಮ ಮನೆಗೆ ನುಗ್ಗಿ, ಗುಂಡಿಕ್ಕುತ್ತೇವೆ’ ಎಂದು ರಾಜ್ ಸಿಂಗ್ ವಿಡಿಯೊದಲ್ಲಿ ಬೆದರಿಕೆ ಹಾಕಿದ್ದರು.

‘ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ನ ಇತರೆ 25 ಸಂಸದರಿಗೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಬೊರ್ಖೇಡಾ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ರಾಜ್‌ ಸಿಂಗ್‌ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್‌ ತಿಳಿಸಿದ್ದಾರೆ.

ಉದ್ಯೋಗ್ ನಗರ ಪೊಲೀಸ್ ಠಾಣೆಯಲ್ಲಿ ರಾಜ್‌ ಸಿಂಗ್‌ ವಿರುದ್ಧ ಈಗಾಗಲೇ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ವಿಚಾರಣೆ ಬಳಿಕ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ವಿಡಿಯೊವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಆರ್‌ಎಸ್‌ಎಸ್‌–ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.