ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಫುಲೆ' ಸಿನಿಮಾ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಾತಿ ತಾರತಮ್ಯ ಹಾಗೂ ಅನ್ಯಾಯದ ವಾಸ್ತವ ಅಂಶಗಳು ಮುನ್ನೆಲೆಗೆ ಬಾರದಂತೆ ಮಾಡಲು ಪ್ರತಿ ಹಂತದಲ್ಲಿಯೂ ದಲಿತರು–ಬಹುಜನರ ಇತಿಹಾಸವನ್ನು ಅಳಿಸಿಹಾಕಲು ಬಯಸುತ್ತಿವೆ ಎಂದು ಆರೋಪಿಸಿದ್ದಾರೆ.
ಸಮಾಜ ಸುಧಾರಕರಾದ ಜ್ಯೋತಿರಾವ್ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾದಿತ ಫುಲೆ ಸಿನಿಮಾ, ಶುಕ್ರವಾರ (ಏಪ್ರಿಲ್ 11ರಂದು) ಬಿಡುಗಡೆಯಾಗಬೇಕಿತ್ತು. ಇದೀಗ, ಏಪ್ರಿಲ್ 25ಕ್ಕೆ ಮುಂದೂಡಿಕೆಯಾಗಿದೆ.
ಸೆನ್ಸಾರ್ ವಿಚಾರವಾಗಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸಿನಿಮಾ ಕುರಿತು ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, 'ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರು, ಫುಲೆ ಅವರಿಗೆ ಒಂದೆಡೆ ಮೇಲ್ನೋಟಕ್ಕೆ ಗೌರವ ಸಲ್ಲಿಸುತ್ತಾರೆ. ಮತ್ತೊಂದೆಡೆ, ಅವರ ಜೀವನಾಧಾರಿತ ಸಿನಿಮಾಗೆ ಸೆನ್ಸಾರ್ ಮಾಡುತ್ತಿದ್ದಾರೆ. ಮಹಾತ್ಮ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ತಮ್ಮ ಇಡೀ ಜೀವನವನ್ನು ಜಾತಿ ವ್ಯವಸ್ಥೆ ವಿರುದ್ಧದ ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು. ಆದರೆ, ಈ ಐತಿಹಾಸಿಕ ಸಂಗತಿಗಳು ತೆರೆಯ ಮೇಲೆ ಬರಲು (ಕೇಂದ್ರ) ಸರ್ಕಾರವು ಬಿಡುವುದಿಲ್ಲ' ಎಂದು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್, 'ಜಾತಿ ತಾರತಮ್ಯ ಹಾಗೂ ಅನ್ಯಾಯದ ನೈಜ ಅಂಶಗಳು ಮುನ್ನೆಲೆಗೆ ಬಾರದಂತೆ ಮಾಡುವ ಸಲುವಾಗಿ, ಪ್ರತಿ ಹಂತದಲ್ಲಿಯೂ ದಲಿತ–ಬಹುಜನರ ಇತಿಹಾಸವನ್ನು ಅಳಿಸಿಹಾಕಲು ಬಿಜೆಪಿ–ಆರ್‌ಎಸ್‌ಎಸ್ ಬಯಸುತ್ತವೆ' ಎಂದು ಕಿಡಿಕಾರಿದ್ದಾರೆ.
'ಸ್ಕ್ಯಾಮ್ 1992' ಸಿನಿಮಾ ಖ್ಯಾತಿಯ ನಟ ಪ್ರತೀಕ್ ಗಾಂಧಿ ಹಾಗೂ ಪತ್ರಲೇಖಾ ಅವರು, 'ಫುಲೆ' ಚಿತ್ರದಲ್ಲಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ನಟಿಸಿದ್ದಾರೆ.
ಬಿಡುಗಡೆ ದಿನಾಂಕ ಮುಂದೂಡಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಅನಂತ್ ಮಹಾದೇವನ್, ಬ್ರಾಹ್ಮಣ ಸುಮುದಾಯದವರಿಂದ ಆಕ್ಷೇಪಗಳು ಕೇಳಿಬಂದಿರುವ ಕಾರಣ ಚಿತ್ರ ಬಿಡುಗಡೆ ವಿಳಂಬವಾಗುತ್ತಿದೆ. ಸೆನ್ಸಾರ್ ಕಾರಣದಿಂದಾಗಿ ಅಲ್ಲ. ಸಿನಿಮಾ ಕುರಿತಂತೆ ಸೃಷ್ಟಿಯಾಗಿರುವ ವಿವಾದಗಳನ್ನು ಬಗೆಹರಿಸುವುದೇ ದಿನಾಂಕ ಮುಂದೂಡಿಕೆ ಉದ್ದೇಶ ಎಂದು ತಿಳಿಸಿದ್ದಾರೆ.
ಕೆಲವು ತಿದ್ದುಪಡಿಗೆ ಸೂಚನೆ ನೀಡಿದ್ದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ), ಏಪ್ರಿಲ್ 7ರಂದು ಚಿತ್ರಕ್ಕೆ 'ಯು' ಪ್ರಮಾಣ ಪತ್ರ ನೀಡಿತ್ತು.
ಏಪ್ರಿಲ್ 10ರಂದು ಸಿನಿಮಾದ ಟ್ರೇಲರ್ ಬಿಡೆಯಾಗುತ್ತಿದ್ದಂತೆ, ಬ್ರಾಹ್ಮಣ ಸಮುದಾಯದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಮೂಲದ 'ಹಿಂದೂ ಮಹಾಸಂಘ' ಸಂಘಟನೆ ಅಧ್ಯಕ್ಷ ಆನಂದ್ ದವೆ ಅವರು, ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ನಕಾರಾತ್ಮಕ ಅಂಶಗಳನ್ನೇ ಹೈಲೈಟ್ ಮಾಡುವುದು ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.