ADVERTISEMENT

BJP ಸಂಸದರು ನನ್ನನ್ನು ಸಂಸತ್ ಪ್ರವೇಶಿಸದಂತೆ ತಡೆದು, ತಳ್ಳಿದರು: ರಾಹುಲ್ ಗಾಂಧಿ

ಪಿಟಿಐ
Published 19 ಡಿಸೆಂಬರ್ 2024, 9:29 IST
Last Updated 19 ಡಿಸೆಂಬರ್ 2024, 9:29 IST
<div class="paragraphs"><p>ಸಂಸತ್‌ ಬಳಿಕ ಸಂವಿಧಾನ ಪ್ರತಿ ಹಿಡಿದುಕೊಂಡು ರಾಹುಲ್ ಗಾಂಧಿ ಪ್ರತಿಭಟನೆ</p></div>

ಸಂಸತ್‌ ಬಳಿಕ ಸಂವಿಧಾನ ಪ್ರತಿ ಹಿಡಿದುಕೊಂಡು ರಾಹುಲ್ ಗಾಂಧಿ ಪ್ರತಿಭಟನೆ

   

– ಪಿಟಿಐ ಚಿತ್ರ

ನವದೆಹಲಿ: ಸಂಸತ್‌ ಭವನಕ್ಕೆ ಪ್ರವೇಶಿಸದಂತೆ ಬಿಜೆಪಿ ಸಂಸದರು ತಮ್ಮನ್ನು ಹಾಗೂ ವಿರೋಧ ಪ‍ಕ್ಷಗಳ ಸಂಸದರನ್ನು ತಡೆದರು, ತಳ್ಳಿದರು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ADVERTISEMENT

ಬಿಜೆಪಿ ಸದಸ್ಯರೊಬ್ಬರನ್ನು ರಾಹುಲ್ ಗಾಂಧಿ ತಳ್ಳಿದ್ದಾರೆ, ಅವರು ಬಿಜೆಪಿಯ ಮತ್ತೊಬ್ಬ ಸಂಸದ ಪ್ರತಾಪ್ ಸಾರಂಗಿ ಮೇಲೆ ಬಿದ್ದಿದ್ದಾರೆ. ಇದರಿಂದ ಸಾರಂಗಿ ಗಾಯಗೊಂಡಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿ ಹೇಳಿದ್ದಾರೆ.

‘ನಾನು ಸಂಸತ್ ಭವನಕ್ಕೆ ಪ್ರವೇಶಿಸುತ್ತಿದ್ದೆ. ಈ ವೇಳೆ ಬಿಜೆಪಿ ಸದಸ್ಯರು ನನ್ನನ್ನು ತಡೆದಿದ್ದಾರೆ, ತಳ್ಳಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ’ ಎಂದು ರಾಹುಲ್ ಗಾಂಧಿ ಸಂಸತ್ ಭವನದ ಮಕರ ದ್ವಾರದ ಬಳಿ ಪತ್ರಕರ್ತರೊಂದಿಗೆ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿಯವರನ್ನು ತಳ್ಳಲಾಗಿದೆಯೇ ಎನ್ನುವ ಪ್ರಶ್ನೆಗೆ ‘ಅದು ನಡೆದಿದೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಇದು ಸಂಸತ್‌ನ ಪ್ರವೇಶ ದ್ವಾರ. ಒಳಗೆ ಹೋಗುವ ಹಕ್ಕು ನಮಗೆ ಇದೆ. ಒಳಗೆ ಹೋಗದಂತೆ ಬಿಜೆಪಿ ಸಂಸದರನ್ನು ನಮ್ಮನ್ನು ತಡೆದರು’ ಎಂದು ಮಕರ ದ್ವಾರವನ್ನು ತೋರಿಸುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.

‘ಅವರು ಸಂವಿಧಾನ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಇದೇ ವೇಳೆ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ‘ಇಂಡಿಯಾ’ ಬಣದ ಹಲವು ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸಂಸದರು ಪರಸ್ಪರ ಘೋಷಣೆಗಳನ್ನು ಕೂಗಿಕೊಂಡು ಮುಖಾಮುಖಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.