
ಸಂಬೀತ್ ಪಾತ್ರಾ
ನವದೆಹಲಿ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೂಚನೆಯಂತೆ ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಪುರ ಮತ್ತು ಇತರ ದೇಶಗಳಲ್ಲಿನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಾರತ ವಿರೋಧಿ ಸಂಕಥನವನ್ನು ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.
ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರ ‘ಎಕ್ಸ್’ ಖಾತೆ ಸಹ ಅಮೆರಿಕದಲ್ಲಿದೆ ಎಂದು ದೂರಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ವಿದೇಶಗಳಿಂದ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಆರೋಪಿಸಲಾದ ವಿವಿಧ ‘ಎಕ್ಸ್’ ಖಾತೆಗಳನ್ನು ಪ್ರದರ್ಶಿಸಿದರು.
ಚುನಾವಣಾ ಆಯೋಗ, ಮತಗಳ್ಳತನ, ಬಿಜೆಪಿ– ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನ ಆರೋಪಗಳು ಸೇರಿದಂತೆ ವಿವಿಧ ವಿಷಯಗಳ ಕುರಿತ ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ಪ್ರದರ್ಶಿಸಿದರು.
‘ಕಾಂಗ್ರೆಸ್, ರಾಹುಲ್ ಗಾಂಧಿ ಮತ್ತು ಅವರ ಸಾಮಾಜಿಕ ಮಾಧ್ಯಮ ಹಾಗೂ ಸಲಹಾ ತಂಡವು ಮೋದಿ ಮತ್ತು ದೇಶವನ್ನು ಅಪಮಾನಿಸುವ ಕೆಲಸವನ್ನು 2014ರಿಂದಲೂ ಮಾಡಿಕೊಂಡು ಬರುತ್ತಿದೆ. ಅವಕಾಶ ಸಿಕ್ಕಿದಾಗಲೆಲ್ಲಾ ಕೆಟ್ಟದ್ದಾಗಿ ಬಿಂಬಿಸುತ್ತಿದೆ. ಇದಕ್ಕಾಗಿ ವಿದೇಶಿ ಶಕ್ತಿಗಳ ಬೆಂಬಲವನ್ನು ಪಡೆಯುತ್ತಿದೆ’ ಎಂದು ಪಾತ್ರಾ ದೂರಿದರು.
‘ಕೆಲವು ದಿನಗಳ ಹಿಂದೆ ‘ಎಕ್ಸ್’ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದ್ದರಿಂದ ಇದು ಗೊತ್ತಾಗಿದೆ. ಇದರಲ್ಲಿ ಸಾಮಾಜಿಕ ಮಾಧ್ಯಮಗಳ ಖಾತೆದಾರರ ಸ್ಥಳ, ಖಾತೆ ಪ್ರಾರಂಭಿಸಿದ ದಿನ ಹಾಗೂ ಇತರ ಮಾಹಿತಿ ಪಡೆಯಬಹುದು’ ಎಂದು ಪಾತ್ರಾ ಹೇಳಿದರು.
‘ಮಹಾರಾಷ್ಟ್ರ ಕಾಂಗ್ರೆಸ್‌ನ ‘ಎಕ್ಸ್’ ಖಾತೆ ಐರ್ಲೆಂಡ್‌ನಲ್ಲಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಖಾತೆ ಥಾಯ್ಲೆಂಡ್ ಸಂಪರ್ಕ ಹೊಂದಿದೆ. ‘ಎಕ್ಸ್’ನ ಹೊಸ ವೈಶಿಷ್ಟ್ಯವು ಇದನ್ನು ಬಹಿರಂಗಗೊಳಿಸುತ್ತಿದ್ದಂತೆ ಬಹುತೇಕ ಖಾತೆಗಳು ಭಾರತಕ್ಕೆ ಬದಲಾಗುತ್ತಿವೆ’ ಎಂದು ಅವರು ದೂರಿದರು.
ಬಿಜೆಪಿಯ ಈ ಆರೋಪಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.