ರಾಹುಲ್ ಗಾಂಧಿ
ಪಟ್ನಾ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಜನರ ಮತದಾನದ ಹಕ್ಕಿನ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರದಿಂದ (ಆಗಸ್ಟ್ 17) ‘ಮತ ಅಧಿಕಾರ ಯಾತ್ರೆ’ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕ ಅಖಿಲೇಶ್ ಪ್ರಸಾದ್ ಸಿಂಗ್, ರಾಹುಲ್ ಗಾಂಧಿ ಆಗಸ್ಟ್ 17ರಿಂದ ಸೆಪ್ಟೆಂಬರ್ 1ರವರೆಗೆ ಬಿಹಾರದಲ್ಲಿ ‘ಮತ ಅಧಿಕಾರ ಯಾತ್ರೆ’ ನಡೆಸಲಿದ್ದಾರೆ. ಆಗಾಗಿ ಅವರು ಎರಡು ವಾರ ಬಿಹಾರದಲ್ಲಿ ಉಳಿಯಲಿದ್ದಾರೆ. ಯಾತ್ರೆಯ ಅಂತಿಮ ಸಮಾವೇಶ ಪಟ್ನಾದಲ್ಲಿ ನಡೆಯಲಿದೆ ಎಂದರು.
ಸಸರಾಂನಿಂದ ರಾಹುಲ್ ಗಾಂಧಿ ಯಾತ್ರೆ ಪ್ರಾರಂಭಿಸಲಿದ್ದಾರೆ. ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಅಧಿಕಾರಿಗಳಿಂದ ಪಡೆಯಲಾಗಿದೆ. ಈ ಯಾತ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ 15 ದಿನಗಳ ಕಾಲ ಬಿಹಾರದಲ್ಲೇ ಉಳಿದು ಯಾತ್ರೆಯನ್ನು ಮುನ್ನಡೆಸುವರು. ರಾಜ್ಯದ 25 ಜಿಲ್ಲೆಗಳ ಮೂಲಕ ಯಾತ್ರೆ ಸಾಗಲಿದೆ. ಆಗಸ್ಟ್ 20, 25 ಮತ್ತು 31ರಂದು ಯಾತ್ರೆಗೆ ವಿರಾಮ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಸರಾಂನಿಂದ ಆರಂಭವಾಗಲಿರುವ ಯಾತ್ರೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೊತೆಗೆ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಹಾಗೂ ಇಂಡಿಯಾ ಮೈತ್ರಿಕೂಟದ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.