ADVERTISEMENT

ರಾಜಸ್ಥಾನ ಬಿಕ್ಕಟ್ಟು l ವಿಶ್ವಾಸಮತಕ್ಕೆ ಗೆಹ್ಲೋಟ್‌ ಹಟ

ಅಧಿವೇಶನಕ್ಕೆ ಕಾಂಗ್ರೆಸ್‌ ಒತ್ತಾಯ: ಅಗತ್ಯವೇನು ಎಂದು ಪ್ರಶ್ನಿಸಿದ ರಾಜ್ಯಪಾಲ

ಪಿಟಿಐ
Published 24 ಜುಲೈ 2020, 19:36 IST
Last Updated 24 ಜುಲೈ 2020, 19:36 IST
ರಾಜಭವನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಬೆಂಬಲಿಗ ಶಾಸಕರ ಜತೆ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಮಾತುಕತೆ ನಡೆಸಿದರು –ಪಿಟಿಐ ಚಿತ್ರ
ರಾಜಭವನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಬೆಂಬಲಿಗ ಶಾಸಕರ ಜತೆ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಮಾತುಕತೆ ನಡೆಸಿದರು –ಪಿಟಿಐ ಚಿತ್ರ   

ಜೈಪುರ: ಸಚಿನ್‌ ಪೈಲಟ್ ನೇತೃತ್ವದಲ್ಲಿ 18 ಕಾಂಗ್ರೆಸ್‌ ಶಾಸಕರು ಬಂಡಾಯ ಎದ್ದ ನಂತರದ ದಿನಗಳಲ್ಲಿ ರಾಜಸ್ಥಾನದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ‘ಕಣ್ಣಾಮುಚ್ಚಾಲೆ’ ಮುಂದುವರಿದಿದೆ. ವಿಶ್ವಾಸಮತ ಸಾಬೀತು ಮಾಡುವುದಕ್ಕಾಗಿ ವಿಧಾನಸಭೆಯ ಅಧಿವೇಶನ ಕರೆಯಬೇಕು ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ಈಗ ಅಧಿವೇಶನ ಕರೆಯುವ ಅಗತ್ಯ ಏನು ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.

ವಿಧಾನಸಭೆಯ ಅಧಿವೇಶನ ಕರೆಯಬೇಕು ಎಂದು ರಾಜ್ಯ ಸಚಿವ ಸಂಪುಟವು ಕಳುಹಿಸಿದ ಶಿಫಾರಸಿನಲ್ಲಿ ಲೋಪಗಳಿವೆ. ಯಾವಾಗಿನಿಂದ ಅಧಿವೇಶನ ಕರೆಯಬೇಕು ಎಂದು ಸೂಚಿಸಿಲ್ಲ ಮತ್ತು ಅಧಿವೇಶನದ ಕಾರ್ಯಸೂಚಿಯನ್ನು ಲಗತ್ತಿಸಿಲ್ಲ ಎಂದು
ರಾಜಭವನವು ಗೆಹ್ಲೋಟ್‌ ಅವರಿಗೆ ಶುಕ್ರವಾರ ತಡರಾತ್ರಿ ಬರೆದ ಪತ್ರದಲ್ಲಿ ಹೇಳಿದೆ.

ಸರ್ಕಾರಕ್ಕೆ ಬಹುಮತ ಇರುವಾಗ ವಿಶ್ವಾಸಮತ ಕೋರುವ ಅಗತ್ಯ ಏನು ಎಂದು ಮಿಶ್ರಾ ಪ್ರಶ್ನಿಸಿದ್ದಾರೆ. ಕೋವಿಡ್‌–19 ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಸನ್ನಿವೇಶದಲ್ಲಿ ಅಧಿವೇಶನವನ್ನು ಹೇಗೆ ನಡೆಸಲು ಸಾಧ್ಯ ಎಂಬುದರ ವಿವರಗಳನ್ನು ತಿಳಿಸು
ವಂತೆಯೂ ಅವರು ಸೂಚಿಸಿದ್ದಾರೆ.

ADVERTISEMENT

ಪೈಲಟ್‌ ನೇತೃತ್ವದ ಬಂಡಾಯ ಶಾಸಕರಿಗೆ ಸ್ಪೀಕರ್‌ ನೀಡಿದ ಅನರ್ಹತೆ ನೋಟಿಸ್‌ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ರಾಜಸ್ಥಾನ ಹೈಕೋರ್ಟ್‌ ಶುಕ್ರವಾರ ಬೆಳಗ್ಗೆ ಆದೇಶ ನೀಡುವುದರೊಂದಿಗೆ ರಾಜಕೀಯ ಬಿಕ್ಕಟ್ಟು ಬೇರೊಂದು ತಿರುವು ಪಡೆದು
ಕೊಂಡಿತು. ರಾಜಕೀಯ ಹಗ್ಗಜಗ್ಗಾಟವು ರಾಜಭವನದ ಅಂಗಳ ತಲುಪಿತು.

ವಿಧಾನಸಭೆಯ ಅಧಿವೇಶನ ಕರೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದಲ್ಲಿ ಸುಮಾರು ನೂರು ಶಾಸಕರು ರಾಜಭವನದ ಮುಂದೆ ಮಧ್ಯಾಹ್ನ ನಂತರ ಧರಣಿ ನಡೆಸಿದರು. ಆದರೆ, ಸಂವಿಧಾನದ ನಿಯಮಗಳಿಗೆ ಅನುಸಾರ
ವಾಗಿ ರಾಜಸ್ಥಾನ ವಿಧಾನಸಭೆಯ ಅಧಿವೇಶನ ಕರೆಯಲಾಗುವುದು ಎಂದು ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಭರವಸೆ ನೀಡಿದರು. ಹೀಗಾಗಿ ಸುಮಾರು ಐದು ತಾಸು ಬಳಿಕ ಧರಣಿಯನ್ನು ಕೊನೆಗೊಳಿಸಲಾಯಿತು.

ಕೆಲವು ವಿಚಾರಗಳಲ್ಲಿ ರಾಜ್ಯ ಸರ್ಕಾರದ ಸ್ಪಷ್ಟೀಕರಣ ಬೇಕಾಗಿದೆ. ಈ ಸ್ಪಷ್ಟೀಕರಣ ಸಿಕ್ಕ ಬಳಿಕ ಅಧಿವೇಶನ ಕರೆಯಲಾಗುವುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಸಂವಿಧಾನದ 174ನೇ ವಿಧಿಗೆ ಬದ್ಧವಾಗಿರುವುದಾಗಿ ರಾಜ್ಯಪಾಲರು ಭರವಸೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

ಗೆಹ್ಲೋಟ್‌ ಅವರು ಶುಕ್ರವಾರರಾತ್ರಿ ಸಚಿವ ಸಂಪುಟ ಸಭೆ ನಡೆಸಿ, ರಾಜ್ಯಪಾಲರು ಎತ್ತಿರುವ ಪ್ರಶ್ನೆಗಳ ಬಗ್ಗೆ ಚರ್ಚಿಸಿದ್ದಾರೆ.

ರಾಜ್ಯಪಾಲರಿಗೆ ಆಯ್ಕೆ ಇಲ್ಲ

ರಾಜಸ್ಥಾನ ಸಚಿವ ಸಂಪುಟವು ಅಧಿವೇಶನ ನಡೆಸುವಂತೆ ಮಾಡಿರುವ ಶಿಫಾರಸನ್ನು ಒಪ್ಪಿಕೊಳ್ಳದೆ ರಾಜ್ಯಪಾಲರಿಗೆ ಬೇರೆ ಆಯ್ಕೆಯೇ ಇಲ್ಲ ಎಂದು ಕಾನೂನು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನದಲ್ಲಿ ವಿವರಿಸಿರುವ ಅಧಿಕಾರ ಹಂಚಿಕೆ ಮತ್ತು ರಾಜ್ಯಪಾಲರ ಕರ್ತವ್ಯವನ್ನು ಉಲ್ಲೇಖಿಸಿರುವ ಪರಿಣತರು, ಸಚಿವ ಸಂಪುಟದ ಸಲಹೆಯನ್ನು ಅನುಸರಿಸುವುದು ರಾಜ್ಯಪಾಲರ ಕರ್ತವ್ಯ ಎಂದು ಹೇಳಿದ್ದಾರೆ.

ನಬಂ ರೆಬಿಯಾ (ಅರುಣಾಚಲ ಪ್ರದೇಶ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ನೀಡಿದ ತೀರ್ಪನ್ನು ಉಲ್ಲೇಖಿಸಿರುವ ಹಿರಿಯ ವಕೀಲರಾದ ರಾಕೇಶ್‌ ದ್ವಿವೇದಿ ಮತ್ತು ವಿಕಾಸ್‌ ಸಿಂಗ್‌ ಅವರು, ಸಚಿವ ಸಂಪುಟದ ತೀರ್ಮಾನಕ್ಕೆ ರಾಜ್ಯಪಾಲರು ಬದ್ಧರಾಗಲೇಬೇಕು. ಹಾಗಾಗಿ, ವಿಧಾನಸಭೆಯ ಅಧಿವೇಶನ ಕರೆಯುವುದು ಅನಿವಾರ್ಯ ಎಂದಿದ್ದಾರೆ.

ಸಿಆರ್‌ಪಿಎಫ್‌ ನಿಯೋಜನೆಗೆ ಒತ್ತಾಯ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು (ಸಿಆರ್‌ಪಿಎಫ್‌) ನಿಯೋಜಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಅಧಿವೇಶನ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಶಾಸಕರು ರಾಜಭವನದ ಮುಂದೆ ನಡೆಸಿದ ಧರಣಿಗೆ ಬಿಜೆಪಿ ಹೀಗೆ ಪ್ರತಿಕ್ರಿಯೆ ನೀಡಿದೆ.

‘ಜನರು ಬಂದು ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಹಾಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಎಫ್‌ ಅನ್ನು ನಿಯೋಜಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸುತ್ತೇನೆ. ರಾಜ್ಯ ಪೊಲೀಸರನ್ನು ಕೇಂದ್ರವು ನಂಬಬಾರದು’ ಎಂದು ವಿರೋಧ ಪಕ್ಷದ ನಾಯಕ ಗುಲಾಬ್‌ ಚಂದ್‌ ಕಠಾರಿಯಾ ಹೇಳಿದ್ದಾರೆ.

ಅನರ್ಹತೆ ಸದ್ಯಕ್ಕಿಲ್ಲ

ಪೈಲಟ್‌ ಮತ್ತು ಅವರ ಬೆಂಬಲಿಗರಾದ 18 ಶಾಸಕರ ಅನರ್ಹತೆ ನೋಟಿಸ್‌ನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು, ಅಂದರೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ರಾಜಸ್ಥಾನ ಹೈಕೋರ್ಟ್‌ ಶುಕ್ರವಾರ ಆದೇಶ ನೀಡಿದೆ.

ಶಾಸಕಾಂಗ ಪಕ್ಷವು ಕಳೆದ ವಾರ ನಡೆಸಿದ ಎರಡು ಸಭೆಗಳಿಗೆ ಈ ಶಾಸಕರು ಗೈರುಹಾಜರಾಗುವ ಮೂಲಕ ವಿಪ್‌ ಉಲ್ಲಂಘಿಸಿದ್ದಾರೆ ಎಂದು ಸ್ಪೀಕರ್‌ಗೆ ಕಾಂಗ್ರೆಸ್‌ ದೂರು ನೀಡಿತ್ತು. ಇದರ ಆಧಾರದಲ್ಲಿ ಈ 19 ಶಾಸಕರಿಗೆ ಸ್ಪೀಕರ್‌ ನೋಟಿಸ್‌ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಪೈಲಟ್‌ ಬಣವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಗೆ ಸಂಬಂಧಿಸಿದ ವಾದ, ಪ್ರತಿವಾದ ಪೂರ್ಣಗೊಂಡು ಶುಕ್ರವಾರ ಆದೇಶ ನೀಡುವುದಾಗಿ ಹೈಕೋರ್ಟ್ ಹೇಳಿತ್ತು. ಆದರೆ, ಈ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶ ನೀಡಬಾರದು ಎಂದು ಕೋರಿಸ್ಪೀಕರ್‌ ಸಲ್ಲಿಸಿದ್ದ ಅರ್ಜಿಯನ್ನುಸುಪ್ರೀಂ ಕೋರ್ಟ್‌ ಮಾನ್ಯ ಮಾಡಿಲ್ಲ. ಹಾಗಾಗಿ, ಹೈಕೋರ್ಟ್‌ ಆದೇಶ ಪ್ರಕಟಿಸಿದೆ.

‍ಪ್ರತಿವಾದಿಯಾಗಿ ಕೇಂದ್ರ ಸರ್ಕಾರವನ್ನೂ ಸೇರಿಸಬೇಕು ಎಂಬ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.