ADVERTISEMENT

ಪೈಲಟ್‌ಗೆ ಕಠಿಣ ಸ್ಪರ್ಧೆ: ಯೂನುಸ್‌ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:30 IST
Last Updated 19 ನವೆಂಬರ್ 2018, 20:30 IST
   

ಜೈಪುರ: ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಅವರ ವಿರುದ್ಧ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಬಿಜೆಪಿ ಕಣಕ್ಕಿಳಿಸಿದೆ. ರಾಜ್ಯದ ಏಕೈಕ ಮುಸ್ಲಿಂ ಸಚಿವ ಯೂನುಸ್‌ ಖಾನ್‌ ಅವರಿಗೆ ಟೊಂಕ್‌ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಇಲ್ಲಿ ಡಿಸೆಂಬರ್‌ 7ರಂದು ಮತದಾನ ನಡೆಯಲಿದೆ.

2013ರ ಚುನಾವಣೆಯಲ್ಲಿ ಡಿಡ್‌ವಾನಾ ಕ್ಷೇತ್ರದಿಂದ ಯೂನುಸ್‌ ಜಯಗಳಿಸಿದ್ದರು. ಸೋಮವಾರ ಬಿಡುಗಡೆಯಾದ ಬಿಜೆಪಿಯ ಐದನೇ ಪಟ್ಟಿಯಲ್ಲಿ ಯೂನುಸ್‌ ಹೆಸರು ಇದೆ. ಇದೇ 11ರಂದು ಪ್ರಕಟವಾದ ಪಟ್ಟಿಯಲ್ಲಿ ಟೊಂಕ್‌ ಅಭ್ಯರ್ಥಿಯಾಗಿ ಅಜಿತ್‌ ಸಿಂಗ್‌ ಮೆಹ್ತಾ ಹೆಸರು ಇತ್ತು. ಈ ಕ್ಷೇತ್ರದಿಂದ ಪೈಲಟ್‌ ಹೆಸರು ಪ್ರಕಟವಾದ ಬಳಿಕ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತು.

ಟೊಂಕ್‌ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕ. ಹಾಗಾಗಿ, ಭಾರಿ ಚರ್ಚೆಯ ಬಳಿಕ ಅಜಿತ್‌ ಸಿಂಗ್‌ ಬದಲು ಯೂನುಸ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ಯೂನುಸ್‌ ಆಪ್ತ. ಮೊದಲ ಪಟ್ಟಿಯಲ್ಲಿ ಡಿಡ್‌ವಾನಾದಿಂದ ಯೂನುಸ್‌ ಅವರಿಗೆ ಟಿಕೆಟ್‌ ನೀಡಿಲ್ಲ ಎಂಬ ಕಾರಣಕ್ಕೆ ಅವರ ಬೆಂಬಲಿಗರು ಪ್ರತಿಭಟನೆಯನ್ನೂ ನಡೆಸಿದ್ದರು. ‘ಪಕ್ಷದ ಮೇಲೆ ನನಗೆ ದೃಢವಾದ ನಂಬಿಕೆ ಇದೆ. ಟೊಂಕ್‌ ಕ್ಷೇತ್ರದ ಜನರ ಮೇಲೆಯೂ ನಂಬಿಕೆ ಇದೆ. ಅವರು ಖಂಡಿತವಾಗಿಯೂ ನನಗೆ ಮತ ಹಾಕುತ್ತಾರೆ’ ಎಂದು ಟಿಕೆಟ್‌ ಘೋಷಣೆಯಾದ ಬಳಿಕ ಯೂನುಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಮುಸ್ಲಿಮರು ಮತ್ತು ಗುರ್ಜರ್‌ ಸಮುದಾಯದ ಜನರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪೈಲಟ್‌ ಅವರು ಗುರ್ಜರ್‌ ಸಮುದಾಯಕ್ಕೆ ಸೇರಿದವರು. ‘ಬೆಂಬಲಿಗರ ಮೇಲೆ ನಂಬಿಕೆ ಇದೆ. ವಿಧಾನಸಭೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ ಬಳಿಕ ಹಲವು ಅನುಕೂಲಕರ ಕ್ಷೇತ್ರಗಳ ಆಯ್ಕೆ ಮುಂದಿತ್ತು. ಪಕ್ಷವು ಟೊಂಕ್‌ನಿಂದ ಸ್ಪರ್ಧಿಸುವಂತೆ ಸೂಚಿಸಿದೆ. ಯಾರೇ ಅಭ್ಯರ್ಥಿಯಾದರೂ ದೊಡ್ಡ ವ್ಯತ್ಯಾಸವಿಲ್ಲ’ ಎಂದು ಪೈಲಟ್‌ ಅವರು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆ ಅಲ್ಲ

2013ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಸೌದ್‌ ಸೈದಿ ಸ್ಪರ್ಧಿಸಿದ್ದರು. ಬಿಜೆಪಿಯ ಅಜಿತ್‌ ಸಿಂಗ್‌ ಮೆಹ್ತಾ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಕಾಂಗ್ರೆಸ್‌ ಪಕ್ಷ ಮೂರನೇ ಸ್ಥಾನಕ್ಕೆ ಹೋಗಿತ್ತು. ಬಿಜೆಪಿ ಅಭ್ಯರ್ಥಿಗೆ ಶೇ 46.96ರಷ್ಟು ಮತ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.