ADVERTISEMENT

ಹೆರಿಗೆ ರಜೆ: ಮಹಿಳಾ ಯೋಧರಿಗೂ ವಿಸ್ತರಣೆ, ಪ್ರಸ್ತಾವನೆಗೆ ಸಚಿವ ಸಿಂಗ್‌ ಅನುಮೋದನೆ

ಪಿಟಿಐ
Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
<div class="paragraphs"><p>ರಾಜನಾಥ್ ಸಿಂಗ್‌ </p></div>

ರಾಜನಾಥ್ ಸಿಂಗ್‌

   

ವದೆಹಲಿ: ಭೂಸೇನೆ, ನೌಕಾಪಡೆ, ವಾಯುಪಡೆಯ ಮಹಿಳಾ ಅಧಿಕಾರಿಗಳಿಗೆ ನೀಡುತ್ತಿರುವ ಹೆರಿಗೆ, ಮಕ್ಕಳ ಆರೈಕೆ ಹಾಗೂ ದತ್ತು ಮಗು ಪೋಷಣೆಯ ರಜೆಯ ಸೌಲಭ್ಯವನ್ನು ಈ ಮೂರೂ ಪಡೆಗಳ ಮಹಿಳಾ ಯೋಧರಿಗೂ ಒದಗಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅನುಮೋದನೆ ನೀಡಿದ್ದಾರೆ.  

ಶಸಸ್ತ್ರ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಮಹಿಳೆಯರಿಗೂ, ಅವರ ಶ್ರೇಣಿ ಪರಿಗಣಿಸದೇ ಸಮಾನವಾಗಿ ಈ ಸೌಲಭ್ಯ ಕಲ್ಪಿಸಬೇಕೆಂಬುದು ಸಚಿವ ಸಿಂಗ್‌ ಅವರ ದೃಷ್ಟಿಕೋನವಾಗಿತ್ತು. ಅದೇ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ.

ADVERTISEMENT

‘ಸಶಸ್ತ್ರ ಪಡೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಇಂತಹ ರಜೆ ನಿಯಮ ವಿಸ್ತರಣೆಯು ಅವರ ಕೌಟುಂಬಿಕ ಮತ್ತು ಸಾಮಾಜಿಕ ಹೊಣೆಗಾರಿಗೆ ನಿಭಾಯಿಸಲು ಸಹಕಾರಿಯಾಗಲಿದೆ. ಅಲ್ಲದೆ, ಸೇನೆಯಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಸುಧಾರಿಸಲಿದೆ. ಜತೆಗೆ ಮಹಿಳೆಯರಿಗೆ ತಮ್ಮ ವೃತ್ತಿ ಮತ್ತು ಕೌಟುಂಬಿಕ ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ನೆರವಾಗಲಿದೆ’ ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಪ್ರಸ್ತುತ, ಮಹಿಳಾ ಅಧಿಕಾರಿಗಳು ಪೂರ್ಣ ವೇತನದೊಂದಿಗೆ 180 ದಿನಗಳ ಹೆರಿಗೆ ರಜೆ ಸೌಲಭ್ಯ ಪಡೆಯುತ್ತಿದ್ದಾರೆ. ಇದು ಎರಡು ಮಕ್ಕಳಿಗೆ ಮಾತ್ರ ಅನ್ವಯ.  ಅವರ ಒಟ್ಟು ಸೇವಾ ಅವಧಿಯಲ್ಲಿ 360 ದಿನಗಳ ಶಿಶುಪಾಲನಾ ರಜೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಪೋಷಣೆಗೆ) ಪಡೆಯಲು ಅವಕಾಶವಿದೆ. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ದತ್ತು ಪಡೆದ ದಿನದ ಬಳಿಕ 180 ದಿನ ದತ್ತು ಮಗು ಪೋಷಣೆ ರಜೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.