ADVERTISEMENT

ರಜಾಕಾರರಂತೆ ಪಾಕ್‌ ಭಯೋತ್ಪಾದಕರು: ರಾಜನಾಥ ಸಿಂಗ್ ಕಿಡಿ

ಪಿಟಿಐ
Published 17 ಸೆಪ್ಟೆಂಬರ್ 2025, 12:56 IST
Last Updated 17 ಸೆಪ್ಟೆಂಬರ್ 2025, 12:56 IST
<div class="paragraphs"><p>ರಾಜನಾಥ ಸಿಂಗ್</p></div>

ರಾಜನಾಥ ಸಿಂಗ್

   

–ಪಿಟಿಐ ಚಿತ್ರ

ಹೈದರಾಬಾದ್‌: ‘1948ರಲ್ಲಿ ರಜಾಕಾರರ ಪಿತೂರಿ ವಿಫಲವಾದಂತೆ ಇದೀಗ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಹಾಗೂ ಪಾಕಿಸ್ತಾನದ ಏಜೆಂಟ್‌ಗಳ ಪಿತೂರಿಯೂ ವಿಫಲವಾಗಿದೆ. ‘ಆಪರೇಷನ್‌ ಸಿಂಧೂರ’ದ ಮೂಲಕ ಭಾರತ ತಕ್ಕ ತಿರುಗೇಟು ನೀಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಪ್ರತಿಪಾದಿಸಿದ್ದಾರೆ.

ADVERTISEMENT

ಇಲ್ಲಿ ನಡೆದ ‘ಹೈದರಾಬಾದ್‌ ವಿಮೋಚನಾ’ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ ಸಿಂಗ್, ‘ಭಾರತದ ತಾಳ್ಮೆ ನಮ್ಮ ಶಕ್ತಿಯೇ ಹೊರತು ದೌರ್ಬಲ್ಯವಲ್ಲ ಎಂಬುದನ್ನು ಆಪರೇಷನ್‌ ಸಿಂಧೂರ ಕಾರ್ಯಾಚರಣೆ, 2016ರಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ 2019ರ ಬಾಲಾಕೋಟ್ ವಾಯುದಾಳಿ ನಿರೂಪಿಸಿದೆ. ಮಾತುಕತೆ ಮೂಲಕ ಪರಿಹಾರ ದೊರೆಯುವುದು ವಿಫಲವಾದಾಗ ದೇಶ ಈ ಕಠಿಣ ಮಾರ್ಗವನ್ನು ಅನುಸರಿಸಿತು’ ಎಂದು ಹೇಳಿದ್ದಾರೆ.

’ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಭಯೋತ್ಪಾದಕರು ಧರ್ಮದ ಆಧಾರದಲ್ಲಿ ಹತ್ಯೆ ಮಾಡಿದರು. ಅದೇ ಭಯೋತ್ಪಾದಕರನ್ನು ಭಾರತೀಯ ಸಶಸ್ತ್ರ ಪಡೆಗಳು ಕರ್ಮದ ಆಧಾರದಲ್ಲಿ ಹೊಡೆದುರುಳಿಸಿದವು. ಸಿಂಧೂರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ ಅಷ್ಟೇ. ಮತ್ತೆ ಭಯೋತ್ಪಾದಕ ಚಟುವಟಿಕೆ ಚಿಗುರಿದರೆ ಪೂರ್ಣ ಬಲದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು’ ಎಂದೂ ರಾಜನಾಥ್‌ ಹೇಳಿದ್ದಾರೆ.

ಇದೇ ವೇಳೆ, ರಜಾಕಾರರ ಪಿತೂರಿ ಮಣಿಸಿದ ಆಪರೇಷನ್‌ ಪೋಲೋದಲ್ಲಿ ಭಾಗಿಯಾಗಿದ್ದವರ ಶೌರ್ಯವನ್ನು ಶ್ಲಾಘಿಸಿದ ಸಿಂಗ್, ಸರ್ದಾರ ವಲ್ಲಭಬಾಯಿ ಪಟೇಲ್‌ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಪೋಲೋ ಕಾರ್ಯಾಚರಣೆಯ ಯಶಸ್ಸು ಹಾಗೂ ಹೈದರಾಬಾದ್‌ನ ಏಕೀಕರಣವು ಭಾರತದ ಅದ್ಭುತ ಅಧ್ಯಾಯ ಎಂದೂ ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.