ನವದೆಹಲಿ: ‘ರಾಜ್ಯಸಭೆಗೆ ಹೋಗುವ ಯಾವುದೇ ಇಚ್ಛೆ ಹೊಂದಿಲ್ಲ’ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಪಂಜಾಬ್‌ನ ಪಶ್ಚಿಮ ಲೂಧಿಯಾನ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಗೆಲುವು ಪಡೆದಿದ್ದಾರೆ. ಶಾಸಕರಾಗಿ ಆಯ್ಕೆಯಾಗಿರುವ ಕಾರಣ, ಅರೋರಾ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ.
ನವದೆಹಲಿಯಲ್ಲಿ ಕೇಜ್ರಿವಾಲ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ‘ರಾಜ್ಯಸಭಾ ಸ್ಥಾನಕ್ಕೆ ನನ್ನ ಹೆಸರನ್ನು ಕೆಲವರು ಹೇಳುತ್ತಿದ್ದಾರೆ. ರಾಜ್ಯಸಭೆಗೆ ಹೋಗುವುದಿಲ್ಲ ಎಂದು ನಾನು ನಿಮಗೆ ಸ್ಪಷ್ಟಪಡಿಸುತ್ತೇನೆ. ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ಅಭ್ಯರ್ಥಿಯ ಹೆಸರು ಸೂಚಿಸಲಿದೆ’ ಎಂದು ತಿಳಿಸಿದರು.
ಉಪಚುನಾವಣೆ ಗೆಲುವು ಸೆಮಿಫೈನಲ್ ಇದ್ದಂತೆ: ಗುಜರಾತ್, ಪಂಜಾಬ್ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಕುರಿತು ಸಂತಸ ವ್ಯಕ್ತಪಡಿಸಿರುವ ಅರವಿಂದ್ ಕೇಜ್ರಿವಾಲ್, ಈ ಗೆಲುವು 2027ರ ಚುನಾವಣೆಯ ಸೆಮಿಫೈನಲ್ ಎಂದು ತಿಳಿಸಿದ್ದಾರೆ. ಈ ಫಲಿತಾಂಶದಿಂದ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಜನರು ಸ್ಪಷ್ಟವಾಗಿ ತಿರಸ್ಕರಿಸಿರುವ ಸಂಕೇತ ನೀಡಿದ್ದಾರೆ ಎಂದರು.
ಕೇಜ್ರಿವಾಲ್ ಹೇಳಿಕೆ ಬೆನ್ನಲ್ಲೇ, ರಾಜ್ಯಸಭೆಗೆ ಪಕ್ಷದ ಮುಖಂಡರಾದ ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದರ ಜೈನ್ ಹೆಸರು ಮುಂಚೂಣಿಗೆ ಬಂದಿದೆ.
ಪಂಜಾಬ್ ಘಟಕದ ಉಸ್ತುವಾರಿಯನ್ನಾಗಿ ಸಿಸೊಡಿಯಾ ಅವರನ್ನು ಎಎಪಿ ನಿಯೋಜಿಸಿತ್ತು. ಜೈನ್ ಅವರನ್ನು ಸಹ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿತ್ತು. ಈ ಇಬ್ಬರು ಕೇಜ್ರಿವಾಲ್ ಆಪ್ತರಾಗಿದ್ದಾರೆ. ಸಿಸೋಡಿಯಾ ಅವರು ಬಹುತೇಕ ಸಮಯ ಪಂಜಾಬ್‌ನಲ್ಲೇ ಕಳೆದಿದ್ದಾರೆ. ಹೀಗಾಗಿ ಲೂಧಿಯಾನ ಕ್ಷೇತ್ರದ ಗೆಲುವಿನಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ರಾಜ್ಯಸಭೆಗೆ ಸಿಸೋಡಿಯಾ ಅವರ ಹೆಸರೇ ಬಹುತೇಕ ಅಂತಿಮಗೊಳ್ಳಲಿದೆ ಎಂದೆನ್ನಲಾಗಿದೆ.
ಆದರೆ ಪಕ್ಷದ ಮುಖಂಡರು ಇದನ್ನು ಅಲ್ಲಗಳೆದಿದ್ದು, ಅಭ್ಯರ್ಥಿಯ ನಿರ್ಧಾರವನ್ನು ಪಕ್ಷವೇ ಮಾಡಲಿದೆ ಎಂದಿದ್ದಾರೆ.
‘ರಾಜ್ಯದಲ್ಲಿ ಪರಿವರ್ತನೆ ತರುವುದು ಪಕ್ಷದ ಸದ್ಯದ ಗುರಿಯಾಗಿದೆ. ಅವುಗಳಲ್ಲಿ ಪ್ರಮುಖವಾದ ಶಿಕ್ಷಣ ಕ್ಷೇತ್ರದಲ್ಲಿ ಪಕ್ಷ ಹೆಚ್ಚು ತೊಡಗಿಸಿಕೊಳ್ಳಲು ಬಯಸಿದೆ. ರಾಜ್ಯಸಭಾ ಚುನಾವಣೆ ಎಂದು ನಡೆಯುವುದು ಎಂಬುದು ಗೊತ್ತಿಲ್ಲ. ಹೀಗಾಗಿ ಅಭ್ಯರ್ಥಿಯ ಹೆಸರನ್ನು ಈಗಲೇ ಅಂತಿಮಗೊಳಿಸಲಾಗದು’ ಎಂದು ಮುಖಂಡರು ಹೇಳಿದ್ದಾರೆ.
ಪಂಜಾಬ್‌ನ ಮುಖಂಡರೊಬ್ಬರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗುವುದು ಎಂದು ಪಕ್ಷದ ಮತ್ತೊಬ್ಬ ಮುಖಂಡ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.