ADVERTISEMENT

ಸದನದಲ್ಲಿ ಕಿಡಿ ಹೊತ್ತಿಸಿದ ‘ಠೋಕೆಂಗೆ’: ಕ್ಷಮೆಯಾಚಿಸಿದ ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 11 ಮಾರ್ಚ್ 2025, 23:45 IST
Last Updated 11 ಮಾರ್ಚ್ 2025, 23:45 IST
<div class="paragraphs"><p>ರಾಜ್ಯಸಭೆಯಲ್ಲಿ ಮಂಗಳವಾರ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್‌ ಅವರ ಕ್ಷಮೆ ಕೋರಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ&nbsp; </p></div>

ರಾಜ್ಯಸಭೆಯಲ್ಲಿ ಮಂಗಳವಾರ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್‌ ಅವರ ಕ್ಷಮೆ ಕೋರಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ 

   

 –ಪಿಟಿಐ ಚಿತ್ರ 

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತ ಚರ್ಚೆ ವೇಳೆ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಳಸಿದ ‘ಠೋಕೆಂಗೆ’ ಎಂಬ ಪದ, ರಾಜ್ಯಸಭೆಯಲ್ಲಿ ಮಂಗಳವಾರ ಭಾರಿ ಕೋಲಾಹಲಕ್ಕೆ ಕಾರಣವಾಯಿತು.

ADVERTISEMENT

ಸದನದ ನಾಯಕ ಜೆ.ಪಿ.ನಡ್ಡಾ ಹಾಗೂ ಆಡಳಿತ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಿಗೇ, ಖರ್ಗೆ ಅವರು ತಾವು ನೀಡಿದ ಹೇಳಿಕೆಗಾಗಿ ಉಪಸಭಾಪತಿಯವರ ಕ್ಷಮೆ ಕೋರಿದರು.

‘ನಾನು ನೀಡಿದ ಹೇಳಿಕೆ ಪೀಠ ಕುರಿತಾಗಿರದೇ ಕೇಂದ್ರ ಸರ್ಕಾರವನ್ನು ಕುರಿತದ್ದಾಗಿತ್ತು. ನಾನು ನಿಮ್ಮ ಬಗೆಗೆ ಮಾತನಾಡಿರಲಿಲ್ಲ. ನನ್ನ ಹೇಳಿಕೆಗಳಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುವೆ’ ಎಂದೂ ಖರ್ಗೆ ಸ್ಪಷ್ಟನೆ ನೀಡಿದ ನಂತರ, ಪರಿಸ್ಥಿತಿ ತಿಳಿಯಾಯಿತು.

ಆಗಿದ್ಧೇನು?: ಪ್ರಶ್ನೋತ್ತರ ಅವಧಿ ನಂತರ, ರಾಜ್ಯಸಭೆಯು ಎನ್‌ಇಪಿ ಕುರಿತ ಚರ್ಚೆ ಕೈಗೆತ್ತಿಕೊಂಡಿತು. ತಮಿಳುನಾಡು ಸರ್ಕಾರದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸದನದಲ್ಲಿ ಸೋಮವಾರ ನೀಡಿದ್ದ ಹೇಳಿಕೆ ಪ್ರಸ್ತಾಪಿಸಲು ತುದಿಗಾಲಲ್ಲಿ ನಿಂತಿದ್ದ ವಿಪಕ್ಷಗಳ ಸದಸ್ಯರು, ಸಚಿವ ಪ್ರಧಾನ್‌ ಕ್ಷಮೆಯಾಚಿಸಬೇಕು ಎಂಬ ಬೇಡಿಕೆ ಮಂಡಿಸಲು ಸಜ್ಜಾಗಿದ್ದವು. 

ಶಿಕ್ಷಣ ಸಚಿವಾಲಯ ಕುರಿತು ಚರ್ಚೆ ಆರಂಭಿಸುವಂತೆ ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಅವರಿಗೆ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್‌ ಅವರು ಸೂಚಿಸಿದರು. ಅಗ, ವಿಪಕ್ಷಗಳ ಸದಸ್ಯರು ಎನ್‌ಇಪಿ ಹಾಗೂ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ, ಮಾತನಾಡಲು ಶುರು ಮಾಡಿದಾಗ ಸದನದಲ್ಲಿ ಗದ್ದಲ ಶುರುವಾಯಿತು. ಆಗ ಎದ್ದು ನಿಂತ ಖರ್ಗೆ ನೀಡಿದ ’ಠೋಕೆಂಗೆ’ ಹೇಳಿಕೆ ಕೋಲಾಹಲಕ್ಕೆ ಕಾರಣವಾಯಿತು. 

ಆಡಳಿತ ಪಕ್ಷಗಳ ಸದಸ್ಯರು, ಖರ್ಗೆ ಅವರ ಹೇಳಿಕೆ ‘ಅಸಂಸದೀಯ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಸದನ ನಾಯಕ ಜೆ.ಪಿ.ನಡ್ಡಾ, ‘ವಿಪಕ್ಷ ನಾಯಕ ಖರ್ಗೆ ಬಳಸಿದ ಪದ ಖಂಡನಾರ್ಹ’ ಎಂದರು.

‘ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಖರ್ಗೆ ಅವರು ಕ್ಷಮೆ ಕೇಳಬೇಕು ಹಾಗೂ ಈ ಪದವನ್ನು ಕಡತದಿಂದ ತೆಗೆದು ಹಾಕಬೇಕು’ ಎಂದು ಪೀಠವನ್ನು ಕೋರಿದರು.

ತಕ್ಷಣವೇ ಪ್ರತಿಕ್ರಿಯಿಸಿದ, ಖರ್ಗೆ, ‘ನಾನು ನೀಡಿದ ಹೇಳಿಕೆ ಹಿಂಪಡೆಯುವೆ ಹಾಗೂ ಪೀಠದ ಕ್ಷಮೆ ಕೋರುವೆ’ ಎಂದರು.

‘ಖರ್ಗೆ ಅವರು ಪೀಠದ ಕ್ಷಮೆ ಕೋರಿದ್ದಾರೆ. ಇದು ಒಳ್ಳೆಯ ಹಾಗೂ ಮೆಚ್ಚುವಂಥ ನಡೆ. ಅವರ ಹೇಳಿಕೆಗಳು ಸರ್ಕಾರವನ್ನು ಕುರಿತಾಗಿದ್ದರೂ ಅವು ಖಂಡನಾರ್ಹ’ ಎಂದು ನಡ್ಡಾ ಹೇಳಿದರು.

ಈ ವಿಷಯಕ್ಕೆ ಅಂತ್ಯ ಹಾಡಿದ ಉಪಸಭಾಪತಿಯವರು, ಚರ್ಚೆ ಮುಂದುವರಿಸುವಂತೆ ದಿಗ್ವಿಜಯ ಸಿಂಗ್ ಅವರಿಗೆ ಸೂಚಿಸಿದರು.

ಖರ್ಗೆ ಹೇಳಿದ್ದೇನು?

ಗದ್ದಲದ ಮಧ್ಯೆಯೇ ಎದ್ದು ನಿಂತ ವಿಪಕ್ಷ ನಾಯಕ ಖರ್ಗೆ ಮಾತನಾಡಲು ಮುಂದಾದರು. ಇದಕ್ಕೆ ಅವಕಾಶ ನೀಡದ ಹರಿವಂಶ್ ಸಿಂಗ್ ‘ಬೆಳಗಿನ ಅವಧಿಯಲ್ಲಿಯೇ ನಿಮಗೆ ಮಾತನಾಡಲು ಅವಕಾಶ ನೀಡಲಾಗಿತ್ತು’ ಎಂದರು. ‘ನಾನು ಬೆಳಿಗ್ಗೆ ಮಾತನಾಡುವ ವೇಳೆ ಶಿಕ್ಷಣ ಸಚಿವ ಪ್ರಧಾನ್‌ ಸದನದಲ್ಲಿ ಇರಲಿಲ್ಲ. ಈಗ ನನಗೆ ಮಾತನಾಡಲು ಅವಕಾಶ ನೀಡದಿರುವುದು ಸರ್ವಾಧಿಕಾರಿ ಧೋರಣೆ’ ಎಂದು ಖರ್ಗೆ ಹೇಳಿದರು. ಈ ವೇಳೆ ಮಾತಿನ ಭರದಲ್ಲಿ ಖರ್ಗೆ ಅವರು ‘ನಿಮಗೆ ಎಲ್ಲೆಲ್ಲಿ ಗುದ್ದಬೇಕೋ ಅಲ್ಲಲ್ಲಿ ಸರಿಯಾಗಿ ಗುದ್ದಲಿದ್ದೇವೆ (ಆಪ್ಕೋ ಕ್ಯಾ ಕ್ಯಾ ಠೋಕನಾ ಹೈ ಹಮ್‌ ಠೀಕ್‌ ಸೇ ಠೋಕೆಂಗೆ)’ ಎಂದು ಪೀಠದತ್ತ ಕೈತೋರಿ ಹೇಳಿದ್ದು ಕೋಲಾಹಲಕ್ಕೆ ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.