ADVERTISEMENT

ಅಯೋಧ್ಯೆ | ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಒಂದು ವರ್ಷ: ಭಕ್ತರ ದಂಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2025, 5:44 IST
Last Updated 22 ಜನವರಿ 2025, 5:44 IST
ರಾಮ ಮಂದಿರ
ರಾಮ ಮಂದಿರ   

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೊಂಡು ಇಂದಿಗೆ (ಜ.22) ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಭಕ್ತರ ದಂಡೇ ಹರಿದುಬಂದಿದೆ.

ಶ್ರೀರಾಮನ ದರ್ಶನಕ್ಕೆ ಬಂದ ಹೈದರಾಬಾದ್‌ ಮೂಲದ ಭಕ್ತರೊಬ್ಬರು ಮಾತನಾಡಿ. ‘ನಾವು ಕಳೆದ ಮೂರು ತಿಂಗಳಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆವು. ಮೂರು ದಿನಗಳ ಹಿಂದೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಕೈಗೊಂಡೆವು. ಅಲ್ಲಿಂದ ಅಯೋಧ್ಯೆಗೆ ಬಂದಿದ್ದೇವೆ. ಈ ಕ್ಷಣಕ್ಕೆ 500 ವರ್ಷಗಳ ಹೋರಾಟ ಬೇಕಾಯಿತು. ಸರತಿ ಸಾಲಿನ ವ್ಯವಸ್ಥೆಯಾಗಲಿ, ಭದ್ರತಾ ವ್ಯವಸ್ಥೆಯಾಗಲಿ, ದೇವಸ್ಥಾನದ ಒಳಗಿನ ಸೌಕರ್ಯವಿರಲಿ. ಸಿದ್ಧತೆಗಳನ್ನು ಚೆನ್ನಾಗಿ ಮಾಡಲಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. 

ರಾಜಸ್ಥಾನದ ಮಹಿಳೆಯೊಬ್ಬರು, ‘ರಾಮ್ ಲಲ್ಲಾನ ಜನ್ಮದಿನವನ್ನು ಆಚರಿಸಲು ನಾವು ಇಲ್ಲಿದ್ದೇವೆ. ನಾವು ತುಂಬಾ ಉತ್ಸುಕರಾಗಿದ್ದೇವೆ. ಅವರ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದೇವೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಸ್ಥಾಪಿಸಲು ಅನೇಕರು ಶ್ರಮಿಸಿದ್ದಾರೆ’ ಎಂದರು. 

ADVERTISEMENT

ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿರುವ ಕಾರಣ ಶ್ರೀರಾಮಂದಿರಕ್ಕೆ ಭೇಟಿ ಕೊಡುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಒಂದು ವರ್ಷದ ದಿನವೆಂದು ಹಿಂದೂ ಕ್ಯಾಲೆಂಡರ್ ಆಧರಿಸಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಜ.11 ರಂದು ‘ಪ್ರತಿಷ್ಠಾ ದ್ವಾದಶಿ’ ಎಂದು ವಿಶೇಷ ಪೂಜೆ ಮೂಲಕ ಆಚರಿಸಿದೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.