
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ನ.25) ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದ್ದನ್ನು ಸಾಂಕೇತಿಕವಾಗಿ ಸೂಚಿಸಲು ದೇವಾಲಯದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ.
10 ಅಡಿ ಎತ್ತರ ಮತ್ತು 20 ಅಡಿ ಉದ್ದದ ತ್ರಿಕೋನ ಧ್ವಜವು ಭಗವಾನ್ ರಾಮನ ತೇಜಸ್ಸು ಮತ್ತು ಶೌರ್ಯವನ್ನು ಸಂಕೇತಿಸುವ ಸೂರ್ಯನ ಚಿತ್ರವನ್ನು ಹೊಂದಿದೆ. ಅದರ ಮೇಲೆ 'ಓಂ' ಅನ್ನು ಕೆತ್ತಲಾಗಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಪ್ರಕಟಣೆಯಲ್ಲಿ ತಿಳಿಸಿದೆ.
ಪವಿತ್ರ ಕೇಸರಿ ಧ್ವಜವು ಘನತೆ, ಏಕತೆ ಮತ್ತು ಸಾಂಸ್ಕೃತಿಕ ನಿರಂತರತೆಯ ಸಂದೇಶವನ್ನು ಸಾರುತ್ತದೆ, ರಾಮ ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸುತ್ತದೆ ಎಂದು ಪಿಎಂಒ ತಿಳಿಸಿದೆ.
ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ 'ಶಿಖರ'ದ ಮೇಲೆ ಧ್ವಜವು ಹಾರಲಿದೆ. ದೇವಾಲಯದ ಸುತ್ತಲೂ ದಕ್ಷಿಣ ಭಾರತದ ವಾಸ್ತುಶಿಲ್ಪದ ವಿನ್ಯಾಸ ಮೂಡಿಬಂದಿದೆ.
ಪ್ರಧಾನಿ ಮೋದಿ ಅವರು ಸಪ್ತಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಶೇಶಾವತರ್ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಮಾತಾ ಅನ್ನಪೂರ್ಣ ಮಂದಿರಕ್ಕೂ ಭೇಟಿ ನೀಡಲಿರುವ ಮೋದಿ, ರಾಮ ದರ್ಬಾರ್ ಗರ್ಭಗೃಹದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಮ ಲಲ್ಲಾನ ದರ್ಶನ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯಾಹ್ನದ ವೇಳೆಗೆ, ಪ್ರಧಾನಿ ಮೋದಿ ಅವರು ಅಯೋಧ್ಯೆಯ ರಾಮಮಂದಿರದ 'ಶಿಖರ'ದ ಮೇಲೆ ಕೇಸರಿ ಧ್ವಜವನ್ನು ಶಾಸ್ತ್ರೋಕ್ತವಾಗಿ ಹಾರಿಸಲಿದ್ದಾರೆ. ಇದು ದೇವಾಲಯದ ನಿರ್ಮಾಣ ಪೂರ್ಣಗೊಂಡಿರುವುದನ್ನು ಸಂಕೇತಿಸುತ್ತದೆ. ಇದು ಸಾಂಸ್ಕೃತಿಕ ಆಚರಣೆ ಮತ್ತು ರಾಷ್ಟ್ರೀಯ ಏಕತೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಪಿಎಂಒ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.