ನಿತೀಶ್ ರಾಣೆ
ಚಿತ್ರ: Threads/nitesh.rane23
ಮುಂಬೈ: ‘ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಅವರಿಂದಾಗಿ ಅವಿಭಜಿತ ಶಿವಸೇನಾದಿಂದ ರಾಜ್ ಠಾಕ್ರೆ ಹೊರ ನಡೆಯಬೇಕಾಯಿತು. ಈಗ ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದರೆ ಪತ್ನಿ ಅನುಮತಿಯನ್ನು ಉದ್ಧವ್ ಪಡೆದುಕೊಳ್ಳಬೇಕು’ ಎಂದು ಮಹಾರಾಷ್ಟ್ರ ಸಚಿವ, ಬಿಜೆಪಿ ನಾಯಕ ನಿತೀಶ್ ರಾಣೆ ಹೇಳಿದ್ದಾರೆ.
ಶಿವಸೇನಾ(ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಮೈತ್ರಿ ವದಂತಿ ಬಗ್ಗೆ ಹಿಂದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಣೆ ಪ್ರತಿಕ್ರಿಯಿಸಿದ್ದಾರೆ.
‘ಎಂಎನ್ಎಸ್ ಜೊತೆ ಕೈಜೋಡಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಮೊದಲು ರಶ್ಮಿ ಠಾಕ್ರೆ ಅವರ ಅನುಮತಿ ಪಡೆದಿದ್ದೀರಾ ಎಂದು ನೀವು ಉದ್ಧವ್ ಠಾಕ್ರೆ ಅವರನ್ನು ಕೇಳಬೇಕು. ಅಂತಹ ನಿರ್ಧಾರಗಳಲ್ಲಿ ಅವರ(ರಶ್ಮಿ) ಅಭಿಪ್ರಾಯವು ಹೆಚ್ಚು ಮಹತ್ವದ್ದಾಗಿದೆ’ ಎಂದು ಹೇಳಿದ್ದಾರೆ.
‘ಆ ಸಮಯದಲ್ಲಿ ರಾಜ್ ಮತ್ತು ಉದ್ಧವ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ. ಆದರೂ ರಾಜ್ ಠಾಕ್ರೆ ಶಿವಸೇನಾದಿಂದ ಹೊರ ನಡೆದರು. ರಾಜ್ ನಿರ್ಗಮದಲ್ಲಿ ರಶ್ಮಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಆರೋಪಿಸಿದ್ದಾರೆ.
‘ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಯು ಬಲವಾಗಿದ್ದು, ಯಾವ ಮೈತ್ರಿ ಬಗ್ಗೆಯೂ ನಾವು ಚಿಂತಿಸುವುದಿಲ್ಲ’ ಎಂದು ಇದೇ ವೇಳೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.