ಸಂಜಯ್ ರಾವುತ್
ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ ಮಹಾ ಕುಂಭಮೇಳದಲ್ಲಿ ಉದ್ಧವ್ ಠಾಕ್ರೆ ಭಾಗವಹಿಸದಿರುವ ಬಗ್ಗೆ ಪ್ರಶ್ನಿಸಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಉಪಮುಖ್ಯಮಂತ್ರಿಗೆ ಪ್ರಶ್ನೆಗಳನ್ನು ಹೇಗೆ ಕೇಳಬೇಕೆಂದು ತರಬೇತಿ ನೀಡಬೇಕು. ಶಿಂದೆ ಅವರು ಮೊದಲು ಕುಂಭಮೇಳದಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಯನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಕೇಳಬೇಕು. ಒಬ್ಬ ಹಿಂದೂವಾಗಿ ಭಾಗವತ್ ಅವರು ಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿಲ್ಲದಿದ್ದರೆ, ಉದ್ಧವ್ ಠಾಕ್ರೆ ಅವರನ್ನು ಏಕೆ ಗುರಿಯಾಗಿಸಬೇಕು’ ಎಂದು ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ ಸಂಸ್ಥಾಪಕರಾದ ಕೆ.ಬಿ. ಹೆಡಗೇವಾರ್ ಮತ್ತು ಎಂ.ಎಸ್. ಗೊಳ್‌ವಳಕರ್, ಬಾಳಾ ಸಾಹೇಬ್, ಕೆ. ಸುದರ್ಶನ್ ಅವರು ದೇಶದ ಯಾವುದೇ ಕುಂಭಮೇಳದಲ್ಲಿ ಭಾಗವಹಿಸಿದ್ದ ಚಿತ್ರಗಳನ್ನು ನಾನು ಎಂದಿಗೂ ನೋಡಿಲ್ಲ. ಅಲ್ಲದೆ, ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರು ಸಹ ಕುಂಭಮೇಳಕ್ಕೆ ಭೇಟಿ ನೀಡಿಲ್ಲ ಎಂದು ರಾವುತ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಮಾತನಾಡಿದ ರಾವುತ್, ‘ಪ್ರಧಾನಿಯಾಗುವ ಮೊದಲು ಮೋದಿ ಅವರು ಎಂದಾದರೂ ಕುಂಭಮೇಳಕ್ಕೆ ಭೇಟಿ ನೀಡಿದ್ದಾರಾ?, ಇದು ಕೇವಲ ಪ್ರಚಾರದ ತಂತ್ರಗಳು’ ಎಂದು ಟೀಕಿಸಿದ್ದಾರೆ.
ಕಳೆದ ತಿಂಗಳು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಆದರೆ, ಅವರ ಸಂಪುಟ ಎಷ್ಟು ಮಂದಿ ಸಚಿವರು ಅಥವಾ ಶಾಸಕರು ಅಲ್ಲಿಗೆ ಹೋಗಿದ್ದರು ಎಂದು ರಾವುತ್ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಂದು ಪ್ರಾರಂಭಗೊಂಡಿದ್ದ ಮಹಾ ಕುಂಭಮೇಳ ಫೆಬ್ರುವರಿ 26ರಂದು ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.