ADVERTISEMENT

ಸಾಮಾಜಿಕ ಜಾಲತಾಣಕ್ಕೆ ಆಧಾರ್ ಲಿಂಕ್ ಮಾಡುವ ಪ್ರಸ್ತಾವ ಇಲ್ಲ: ರವಿಶಂಕರ್ ಪ್ರಸಾದ್

ಪಿಟಿಐ
Published 20 ನವೆಂಬರ್ 2019, 14:45 IST
Last Updated 20 ನವೆಂಬರ್ 2019, 14:45 IST
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್   

ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಆಧಾರ್ ಜತೆ ಲಿಂಕ್ ಮಾಡುವ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಹೇಳಿದ್ದಾರೆ.

ವ್ಯಕ್ತಿಗಳ ಸಾಮಾಜಿಕ ಮಾಧ್ಯಮ ಖಾತೆಯನ್ನು ಆಧಾರ್ ಜತೆ ಲಿಂಕ್ ಮಾಡುವ ಬಗ್ಗೆಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ ಎಂದುಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಇದು ಕಾರ್ಯ ನೀತಿ ವಿಚಾರ. ಆಧಾರ್ ಬಳಸಿ ವ್ಯಕ್ತಿಗಳ ಮಾಹಿತಿ ಪಡೆಯುವುದನ್ನು ಯುಐಡಿಎಐ ಅವಕಾಶ ನೀಡುವುದಿಲ್ಲ.ಆಧಾರ್‌ನಲ್ಲಿರುವ ಮಾಹಿತಿ ಇನ್‌ಕ್ರಿಪ್ಟ್ ಮಾಡಿದ್ದು ಅದನ್ನು ಯಾವತ್ತೂ ಶೇರ್ ಮಾಡಲಾಗುವುದಿಲ್ಲ. ಆಧಾರ್ ಎಂಬುದು ಕನಿಷ್ಠ ಮಾಹಿತಿ, ಸೂಕ್ತ ಮೌಢ್ಯ ಮತ್ತು ಸಂಯುಕ್ತ ಡೇಟಾಬೇಸ್‍ ಈ ಮೂರು ಮುಖ್ಯ ಮೂಲತತ್ವವನ್ನು ಆಧರಿಸಿದೆ.

ಆಧಾರ್ ನೋಂದಣಿಯಾಗುವ ವೇಳೆ ವ್ಯಕ್ತಿ ನೀಡಿರುವ ಮಾಹಿತಿಯನ್ನು ಮಾತ್ರ ಅದು ಹೊಂದಿರುತ್ತದೆ. ನೋಂದಣಿ ವೇಳೆ ನೀಡಿದ ಫೋನ್ ಸಂಖ್ಯೆ, ಇಮೇಲ್ ಖಾತೆ, ಹೆಸರು, ವಿಳಾಸ, ಲಿಂಗ, ಜನನ ದಿನಾಂಕ, ಫೋಟೊ ಮತ್ತು ಬಯೋಮೆಟ್ರಿಕ್ ಮೂಲಕ ಪಡೆಯಲಾದ ಗುರುತಿನ ಮಾಹಿತಿ ಆಧಾರ್‌ನಲ್ಲಿರುತ್ತದೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಅನಿವಾಸಿ ಭಾರತೀಯರು ಭಾರತಕ್ಕೆ ಬಂದ ನಂತರವೇ ಆಧಾರ್ ಪಡೆಯಲು ಸಾಧ್ಯ ಎಂದಿದ್ದಾರೆ.

ಅಕ್ಟೋಬರ್ 31ರವರೆಗೆ 3,433 3,433 ಯುಆರ್‌ಎಲ್ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬ್ಲಾಕ್ ಮಾಡಲಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ಹೇಳಿದ್ದಾರೆ.

2016ರಲ್ಲಿ 633, 2017ರಲ್ಲಿ 1,385 ಮತ್ತು 2018ರಲ್ಲಿ 2,799 ಯುಆರ್‌ಎಲ್‌ಗಳನ್ನು ಬ್ಲಾಕ್ ಮಾಡಲಾಗಿದೆ.
ದೇಶದ ಏಕತೆ, ಸ್ವಾತಂತ್ರ್ಯ, ರಾಜ್ಯದ ಸುರಕ್ಷೆ, ದೇಶದ ಭದ್ರತೆಗೆ ಧಕ್ಕೆ ತರುವಯಾವುದೇ ಮಾಹಿತಿಗಳನ್ನು ಬ್ಲಾಕ್ ಮಾಡಲು ಐಟಿ ಕಾಯ್ದೆ 2000ರ ಸೆಕ್ಷನ್ 69ಎ ಅನುವು ಮಾಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.