ADVERTISEMENT

ಅಮರಿಂದರ್ ಸ್ನೇಹಿತೆಗೆ ಪಾಕ್ ಐಎಸ್ಐ ನಂಟು: ರಾ ತನಿಖೆ ನಡೆಸಲಿ -ಪಂಜಾಬ್‌ ಡಿಸಿಎಂ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 3:28 IST
Last Updated 23 ಅಕ್ಟೋಬರ್ 2021, 3:28 IST
ಪಂಜಾಬ್‌ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ
ಪಂಜಾಬ್‌ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ   

ನವದೆಹಲಿ: ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸ್ನೇಹಿತೆ ಪಾಕಿಸ್ತಾನದ ಪತ್ರಕರ್ತೆ ಅರೂಸಾ ಅಲಂ ಅವರು ಪಾಕ್‌ ಗುಪ್ತಚರ ಸಂಸ್ಥೆಯ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್-ಐಎಸ್‌ಐ) ಸಂಪರ್ಕದಲ್ಲಿದ್ದಾರೆಯೇ ಎಂಬುದರ ಬಗ್ಗೆ ಸಂಶೋದನೆ ಮತ್ತು ವಿಶ್ಲೇಷಣಾ ದಳ (RAW-ರಾ) ತನಿಖೆ ನಡೆಸಬೇಕು ಎಂದು ಪಂಜಾಬ್‌ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ ಹೇಳಿದ್ದಾರೆ.

ಅಮರಿಂದರ್ ಸಿಂಗ್‌ ಅವರೊಂದಿಗೆ ಅಲಂ ಹಲವು ವರ್ಷಗಳಿಂದ ಸಂಪರ್ಕದಲ್ಲಿದ್ದಾರೆ.

ನವದೆಹಲಿಯಲ್ಲಿಮಾಧ್ಯಮದವರೊಂದಿಗೆ ಮಾತನಾಡಿರುವ ರಾಂಧವ,ಈ ವಿಚಾರವಾಗಿ ಇದುವರೆಗೆ ಯಾವುದೇ ತನಿಖೆ ನಡೆದಿಲ್ಲ. ಅವರು (ಅಮರಿಂದರ್‌ ಸಿಂಗ್)‌ ಇದನ್ನು ತಪ್ಪಾಗಿತೆಗೆದುಕೊಳ್ಳುತ್ತಾರೆ. ಅವರಲ್ಲಿನ ಭಯ ಅದಕ್ಕೆ ಕಾರಣವೆಂದು ನನಗನಿಸುತ್ತದೆ. ಅಮರಿಂದರ್‌ ಐಎಸ್‌ಐ ಎಂಜೆಂಟ್‌ ಜೊತೆ ಸಂಪರ್ಕದಲ್ಲಿದ್ದಾರೆಯೇ ಎಂದು ನಾನು ಇತ್ತೀಚೆಗೆ ಪ್ರಶ್ನಿಸಿದ್ದೆ. ಹಾಗೇನಾದರೂ ಇದ್ದರೆ ಆ ಬಗ್ಗೆ ಗಮನ ಹರಿಸಲಾಗುವುದು ಎಂದೂ ಹೇಳಿದ್ದೆʼ ಎಂದಿದ್ದಾರೆ.

ADVERTISEMENT

ʼಅಮರಿಂದರ್‌ ಸಿಂಗ್ ಮುಖ್ಯಮಂತ್ರಿಯಾಗಿದ್ದವರು.‌ ಅಂತರರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ʼರಾʼ ನಡೆಸುತ್ತದೆ, ರಾಜ್ಯ ಸರ್ಕಾರವಲ್ಲ ಎಂಬುದನ್ನು ತಿಳಿದಿರಬೇಕು. ಅವರು ಹೆದರುತ್ತಿರುವುದೇಕೆ ಎಂಬುದು ಗೊತ್ತಾಗುತ್ತಿಲ್ಲʼ ಎಂದು ಹೇಳಿದ್ದಾರೆ.

ʼಐಎಸ್‌ಐನಿಂದ ಭೀತಿ ಇದೆ ಎಂದು ಅವರು (ಅಮರಿಂದರ್‌ ಸಿಂಗ್)‌ ಈಗ ಹೇಳುತ್ತಿದ್ದಾರೆ. ಐಎಸ್‌ಐ ಜೊತೆ ಮಹಿಳೆಯ ಸಂಬಂಧವೇನು ಎಂಬುದರತ್ತ ಗಮನ ಹರಿಸುತ್ತೇವೆ.‌ ಕಳೆದ ನಾಲ್ಕೈದು ವರ್ಷಗಳಲ್ಲಿ ಪಾಕಿಸ್ತಾನದಿಂದ ಬರುತ್ತಿರುವ ಡ್ರೋನ್‌ ಸಮಸ್ಯೆಯ ಬಗ್ಗೆಅಮರಿಂದರ್‌ ಮಾತನಾಡುತ್ತಲೇ ಇದ್ದರು. ಈ ಸಮಸ್ಯೆಬಗ್ಗೆಮೊದಲು ಪ್ರಸ್ತಾಪಿಸಿದ್ದೂ ಅವರೇ.ನಂತರ ಪಂಜಾಬ್‌ನಲ್ಲಿ ಬಿಎಸ್‌ಎಫ್‌ ನಿಯೋಜಿಸಲಾಯಿತು. ಈ ಬಗ್ಗೆ ನಿಗಾ ವಹಿಸುವಂತೆ ಡಿಜಿಪಿಗೆ ಸೂಚಿಸುತ್ತೇವೆʼ ಎಂದಿದ್ದಾರೆ.

ಅರೂಸಾ ಅಲಂ ಅವರ ವೀಸಾ ಅವಧಿ ನಿಯಮಿತವಾಗಿ ವಿಸ್ತರಣೆಯಾಗುತ್ತಾ ಬಂದಿದೆ ಎಂದೂ ಮಾಹಿತಿ ನೀಡಿರುವ ರಾಂಧವ,ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‌ ನಾಯಕರ ಭೇಟಿ ಸಲುವಾಗಿ ರಾಂಧವ ರಾಷ್ಟ್ರ ರಾಜಧಾನಿಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.