
ದೆಹಲಿ ಸ್ಫೋಟ: 40ಕ್ಕೂ ಅಧಿಕ ಮಾದರಿಗಳ ಸಂಗ್ರಹ
(ಪಿಟಿಐ ಚಿತ್ರ)
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ್ದ ಸ್ಫೋಟದ ಸ್ಥಳದಿಂದ ಒಂದು ಜೀವಂತ ಮದ್ದುಗುಂಡು, ಎರಡು ಕಾರ್ಟ್ರಿಡ್ಜ್ ಸೇರಿದಂತೆ 40ಕ್ಕೂ ಅಧಿಕ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ತಂಡವು (ಎಫ್‌ಎಸ್‌ಎಲ್) ಸಂಗ್ರಹಿಸಿದೆ ಎಂದು ಅಧಿಕಾರಿಗಳು ಇಂದು (ಬುಧವಾರ) ತಿಳಿಸಿದ್ದಾರೆ.
ಇದರಲ್ಲಿ ಎರಡು ವಿಭಿನ್ನ ರೀತಿಯ ಸ್ಫೋಟಕಗಳ ಮಾದರಿಗಳು ಸೇರಿವೆ.
ಪ್ರಾಥಮಿಕ ಪರಿಶೀಲನೆಯಲ್ಲಿ ಒಂದು ಸ್ಫೋಟಕದ ಮಾದರಿಯಲ್ಲಿ ಅಮೋನಿಯಂ ನೈಟ್ರೇಟ್ ಇದೆ ಎಂದನಿಸುತ್ತದೆ ಎಂದು ಅವರು ಹೇಳಿದ್ದಾರೆ.
ಎರಡನೇ ಸ್ಫೋಟಕ ಮಾದರಿಯು ಅಮೋನಿಯಂ ನೈಟ್ರೇಟ್‌ಗಿಂತ ಹೆಚ್ಚು ಶಕ್ತಿಶಾಲಿ ಎಂದು ಅಂದಾಜಿಸಲಾಗಿದೆ. ವಿಧಿವಿಜ್ಞಾನದ ನಿಖರವಾದ ಪರೀಕ್ಷೆಯ ಬಳಿಕವಷ್ಟೇ ಇದನ್ನು ದೃಢೀಕರಿಸಲಾಗುವುದು ಎಂದು ಹೇಳಿದ್ದಾರೆ.
ಸೋಮವಾರ ಫರೀದಾಬಾದ್‌ನಲ್ಲಿ 360 ಕೆ.ಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ 2,900 ಕೆ.ಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಟ್ರಾಫಿಕ್ ಸಿಗ್ನಲ್‌ನಲ್ಲಿ ಸೋಮವಾರದಂದೇ (ನ.10) ಸಂಭವಿಸಿದ್ದ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಸ್ಫೋಟಕದ ಸ್ವರೂಪದ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ಮಾದರಿಗಳ ಪರೀಕ್ಷೆಗೆ ಎಫ್‌ಎಸ್‌ಎಲ್ ವಿಶೇಷ ತಂಡವನ್ನು ರಚಿಸಿದೆ.
ದೆಹಲಿ ಸ್ಫೋಟ: 40ಕ್ಕೂ ಅಧಿಕ ಮಾದರಿಗಳ ಸಂಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.