ಸ್ಫೋಟ ನಡೆದ ಪ್ರದೇಶವನ್ನು ಬಟ್ಟೆಯ ಪರದೆಗಳಿಂದ ಮುಚ್ಚಿರುವುದು
– ಪಿಟಿಐ ಚಿತ್ರ
ನವದೆಹಲಿ: 9 ಮಂದಿ ಸಾವಿಗೆ ಕಾರಣವಾದ ಭಾರಿ ಸ್ಫೋಟದ ಬೆನ್ನಲ್ಲೇ ಕೆಂಪು ಕೋಟೆ ಮೆಟ್ರೊ ನಿಲ್ದಾಣವನ್ನು ಪ್ರಯಾಣಿಕರಿಗೆ ಮುಚ್ಚಲಾಗಿದೆ. ಪ್ರದೇಶದಲ್ಲಿ ಸಂಚಾರ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ದೆಹಲಿ ಮೆಟ್ರೊ ರೈಲು ನಿಗಮ ‘ಲಾಲ್ ಕಿಲಾ ಮೆಟ್ರೊ ನಿಲ್ದಾಣವನ್ನು ಭದ್ರತಾ ಕಾರಣಗಳಿಂದ ಮುಚ್ಚಲಾಗಿದೆ. ಉಳಿದ ಎಲ್ಲಾ ನಿಲ್ದಾಣಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ’ ಎಂದು ಹೇಳಿದೆ.
ನೇತಾಜಿ ಸುಭಾಷ್ ಮಾರ್ಗ ಛಟ್ಟಾ ರೈಲ್ ಕಟ್‌ನಿಂದ ಸುಭಾಷ್ ಮಾರ್ಗ್ ಕಟ್‌ವರೆಗೆಗಿನ ವಾಹನ ರಸ್ತೆ ಹಾಗೂ ಸರ್ವಿಸ್ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಹಾಗೂ ಕೆಲವೊಂದು ಮಾರ್ಗ ಬದಲಾವಣೆ ಮಾಡಲಾಗಿರುವ ಬಗ್ಗೆ ದೆಹಲಿ ಸಂಚಾರ ಪೊಲೀಸರು ಸಲಹಾ ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ.
ಸುಗಮ ಸಂಚಾರಕ್ಕೆ ಪ್ರಯಾಣಿಕರು ಬೆಳಿಗ್ಗೆ 6 ಗಂಟೆಯಿಂದ ಮುಂದಿನ ಸಲಹೆವರೆಗೂ ಈ ರಸ್ತೆ ಬಳಕೆ ತಪ್ಪಿಸಿ. ನೇತಾಜಿ ಸುಭಾಷ್ ಮಾರ್ಗ ಛಟ್ಟಾ ರೈಲ್ ಕಟ್‌ನಿಂದ ಸುಭಾಷ್ ಮಾರ್ಗ್ ಕಟ್‌ವರೆಗೆ ಯಾವುದೇ ವಾಹನಗಳಿಗೆ ಪ್ರವೇಶ ಇಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
ಇಡೀ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಏರ್‌ಪೋರ್ಟ್, ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.