ADVERTISEMENT

ಭಾರತೀಯ ಮೀನುಗಾರರ ಬಿಡುಗಡೆ: ಮಧ್ಯಸ್ಥಿಕೆ ವಹಿಸಲು ಕೇಂದ್ರಕ್ಕೆ ಪತ್ರ ಬರೆದ ಸ್ಟಾಲಿನ್‌

ಪಿಟಿಐ
Published 10 ಜುಲೈ 2023, 12:55 IST
Last Updated 10 ಜುಲೈ 2023, 12:55 IST
ಎಂ.ಕೆ. ಸ್ಟಾಲಿನ್‌
ಎಂ.ಕೆ. ಸ್ಟಾಲಿನ್‌   

ಚೆನ್ನೈ: ಸಮುದ್ರ ಗಡಿ ದಾಟಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿರುವ ಆರೋಪದ ಮೇಲೆ ತಮಿಳುನಾಡಿನ 15 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂಧಿಸಿದ್ದು, ಬಂಧಿತ ಮೀನುಗಾರರು ಮತ್ತು ಹಡಗುಗಳನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ‘ಮೀನುಗಾರರ ಬಂಧನ ಮತ್ತು ಮೀನುಗಾರಿಕಾ ಹಡಗುಗಳನ್ನು ಶ್ರೀಲಂಕಾ ವಶಪಡಿಸಿಕೊಂಡಿರುವುದು ರಾಜ್ಯದ ಮೀನುಗಾರ ಸಮುದಾಯದಲ್ಲಿ ಆತಂಕ ಮತ್ತು ಭಯವನ್ನು ಉಂಟುಮಾಡಿದೆ ಎಂದು ವಿವರಿಸಿದ್ದಾರೆ.

‍‘ಶ್ರೀಲಂಕಾದ ಡೆಲ್ಫ್ಟ್‌ ದ್ವೀಪದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಶನಿವಾರ ರಾತ್ರಿ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ 15 ಭಾರತೀಯ ಮೂಲದ ಮೀನುಗಾರರು ಬಂಧನಕ್ಕೊಳಗಾಗಿದ್ದಾರೆ’ ಎಂದು ನೌಕಾಪಡೆ ಪ್ರಕಟಣೆ ತಿಳಿಸಿತ್ತು.

ADVERTISEMENT

ಬಂಧಿತ ಮೀನುಗಾರರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮತ್ತು ವಶಪಡಿಸಿಕೊಂಡಿರುವ ಎಲ್ಲಾ ಮೀನುಗಾರಿಕಾ ಹಡಗುಗಳನ್ನು ಹಿಂದಿರುಗಿಸಲು ಸಚಿವರು ಮಧ್ಯಸ್ಥಿಕೆ ವಹಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

‘ರಾಜತಾಂತ್ರಿಕ ಮಾರ್ಗಗಳ ಮೂಲಕ, ಭಾರತ ಮತ್ತು ಶ್ರೀಲಂಕಾ ನಡುವೆ ಸೌಹಾರ್ದ ದ್ವಿಪಕ್ಷೀಯ ಸಂಬಂಧಗಳನ್ನು ಉಳಿಸಿಕೊಂಡು, ನಮ್ಮ ಮೀನುಗಾರರ ಹಕ್ಕುಗಳು ಮತ್ತು ಜೀವನೋಪಾಯವನ್ನು ಗೌರವಿಸುವ ಸೌಹಾರ್ದಯುತ ನಿರ್ಣಯವನ್ನು ನಾವು ತೆಗೆದುಕೊಳ್ಳಬಹುದಾಗಿದೆ. ನಿಮ್ಮ ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದು ಸ್ಟಾಲಿನ್‌ ತಿಳಿಸಿದ್ದಾರೆ.

ಕಳೆದ ತಿಂಗಳು ತಮಿಳುನಾಡು ಮೂಲದ 22 ಮೀನುಗಾರರನ್ನು ಶೀಲಂಕಾ ನೌಕಾಪಡೆ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.