ADVERTISEMENT

ಉಕ್ರೇನ್‌ನಿಂದ ಆನ್‌ಲೈನ್‌ ಕ್ಲಾಸ್‌: ಭಾರತೀಯ ವಿದ್ಯಾರ್ಥಿಗಳು ನಿರಾಳ

ಪಿಟಿಐ
Published 15 ಮಾರ್ಚ್ 2022, 15:43 IST
Last Updated 15 ಮಾರ್ಚ್ 2022, 15:43 IST
ಆನ್‌ಲೈನ್ ತರಗತಿ (ಸಾಂದರ್ಭಿಕ ಚಿತ್ರ)
ಆನ್‌ಲೈನ್ ತರಗತಿ (ಸಾಂದರ್ಭಿಕ ಚಿತ್ರ)   

ನವದೆಹಲಿ: ಯುದ್ಧದ ಪರಿಸ್ಥಿತಿ ನಡುವೆಯೇ ಉಕ್ರೇನ್‌ನಲ್ಲಿನ ಹಲವು ವಿಶ್ವವಿದ್ಯಾಲಯಗಳು ತನ್ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಸೋಮವಾರ ಆರಂಭಿಸಿವೆ. ಯುದ್ಧದಿಂದಾಗಿ ಶಿಕ್ಷಣ ಮಸುಕಾಗಲಿದೆ ಎಂದು ಆತಂಕಗೊಂಡಿದ್ದ ಭಾರತದ ವಿದ್ಯಾರ್ಥಿಗಳಲ್ಲಿ ಇದು ಹೊಸ ಭರವಸೆ ಮೂಡಿಸಿದೆ.

‘ಆನ್‌ಲೈನ್ ತರಗತಿ ನಿಜಕ್ಕೂ ಭಾವನಾತ್ಮಕವಾಗಿತ್ತು. ಬೋಧಕರೂ ಭಾವನಾತ್ಮಕವಾಗಿದ್ದರು. ಮಧ್ಯಾಹ್ನ 12.30ರಿಂದ 7 ಗಂಟೆವರೆಗೆ ತರಗತಿಗಳು ನಡೆದವು. ತರಗತಿಯ ವೇಳಾಪಟ್ಟಿಯನ್ನು ಒದಗಿಸಲಾಗಿದೆ’ ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.

ಪಶ್ಚಿಮ ಉಕ್ರೇನ್‌ನಲ್ಲಿ ಇರುವ ಬಹುತೇಕ ವಿಶ್ವವಿದ್ಯಾಲಯಗಳು ಸೋಮವಾರ ಆನ್‌ಲೈನ್ ತರಗತಿ ಆರಂಭಿಸಿವೆ. ರಷ್ಯಾದ ಪಡೆಗಳು ಶೆಲ್‌ ದಾಳಿ ಮುಂದುವರಿಸಿರುವ ಕಾರಣ ಭೌತಿಕ ತರಗತಿಗಳ ಪುನಾರಂಭ ಅಸಾಧ್ಯ ಎಂಬ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿವೆ. ಇತರೆ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿ ಆರಂಭಿಸುವ ಸಂಭವವಿದೆ.

ADVERTISEMENT

ಶೆಲ್‌ ದಾಳಿಯ ನಡುವೆಯೇ ಸುರಕ್ಷಿತ ತಾಣದಿಂದ ಬೋಧಕರು ಆನ್‌ಲೈನ್‌ ತರಗತಿ ನಡೆಸುತ್ತಿದ್ದಾರೆ ಎಂದು ಲೀವ್‌ನ ಡಾನಿಲೊ ಹಾಲಿಟ್ಸ್ಕೈ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಕನಿಷ್ಕ್‌ ಅವರು ಪ್ರತಿಕ್ರಿಯಿಸಿದರು.

‘ಏನೂ ಇಲ್ಲದಿರುವುದಕ್ಕಿಂತಲೂ ಇದು ಒಳ್ಳೆಯದು. ನನಗೆ ಖುಷಿಯಾಗಿದೆ. ನಮ್ಮ ಶಿಕ್ಷಣದ ಭವಿಷ್ಯ ಏನಾದಿತೋ ಎಂಬ ಆತಂಕ ತುಂಬಾ ಕಾಡುತ್ತಿತ್ತು’ ಎಂದು ಅವರು ಹೇಳಿದರು. ಆನ್‌ಲೈನ್‌ ತರಗತಿಗಳು ಇಂದು ಆರಂಭವಾಗಿವೆ ಎಂದು ಇನ್ನೊಬ್ಬ ವಿದ್ಯಾರ್ಥಿ ಮನೋಗ್ಯಾ ಸಂತಸ ವ್ಯಕ್ತಪಡಿಸಿದರು.

‘ಆನ್‌ಲೈನ್‌ ತರಗತಿಗಳಷ್ಟೇ ಸಾಲದು ಎಂಬುದು ನಮಗೆ ಗೊತ್ತಿದೆ. ಆದರೂ, ಪರವಾಗಿಲ್ಲ. ನಾವು ಶಿಕ್ಷಣ ಮುಂದುವರಿಸಬಹುದು ಎಂದು ವಿನ್ನಿಟ್ಸಿಯಾ ನ್ಯಾಷನಲ್‌ ಪಿರೊಗೋವ್ ವಿಶ್ವವಿದ್ಯಾಲದಯ ವೈದ್ಯಕೀಯ ವಿದ್ಯಾರ್ಥಿ ಕಿಂಜಾಲ್ ಚೌಹಾಣ್ ಹೇಳಿದರು.

ಹಾರ್ಕಿವ್‌ನ ನ್ಯಾಷನಲ್‌ ಮೆಡಿಕಲ್ ಯೂನಿವರ್ಸಿಟಿ ಮಾರ್ಚ್ 21ರಿಂದ ಆನ್‌ಲೈನ್‌ ತರಗತಿ ಆರಂಭಿಸುವ ಸಂಭವವಿದೆ. ಉಕ್ರೇನ್‌ನಿಂದ ಸಾವಿರಾರು ವಿದ್ಯಾರ್ಥಿಗಳು ದೇಶಕ್ಕೆ ಮರಳಿದ್ದಾರೆ.

‘ಆಪರೇಷನ್ ಗಂಗಾ’ ಕಾರ್ಯಾಚರಣೆಯ ಮೂಲಕವೇ ಸುಮಾರು 20,000 ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ವಾಪಸು ಕರೆತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.