ADVERTISEMENT

ಗಣರಾಜ್ಯೋತ್ಸವ ಪರೇಡ್: ಉತ್ತರ ಪ್ರದೇಶ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

ಪಿಟಿಐ
Published 29 ಜನವರಿ 2025, 10:30 IST
Last Updated 29 ಜನವರಿ 2025, 10:30 IST
<div class="paragraphs"><p>ಗಣರಾಜ್ಯೋತ್ಸವದಲ್ಲಿ ದೆಹಲಿಯ ಕರ್ಥವ್ಯ ಪಥದಲ್ಲಿ ಪ್ರದರ್ಶನಗೊಂಡ ಉತ್ತರ ಪ್ರದೇಶದ ಸ್ತಬ್ಧಚಿತ್ರ</p></div>

ಗಣರಾಜ್ಯೋತ್ಸವದಲ್ಲಿ ದೆಹಲಿಯ ಕರ್ಥವ್ಯ ಪಥದಲ್ಲಿ ಪ್ರದರ್ಶನಗೊಂಡ ಉತ್ತರ ಪ್ರದೇಶದ ಸ್ತಬ್ಧಚಿತ್ರ

   

ಪಿಟಿಐ ಚಿತ್ರ

ನವದೆಹಲಿ: ಮಹಾಕುಂಭ ಮೇಳ ಕುರಿತ ಸ್ತಬ್ಧಚಿತ್ರವನ್ನು ಸಿದ್ಧಪಡಿಸಿ 76ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಿದ ಉತ್ತರ ಪ್ರದೇಶಕ್ಕೆ ಪ್ರಥಮ ಬಹುಮಾನ ಸಂದಿದೆ. 

ADVERTISEMENT

ಮೂರು ರಕ್ಷಣಾ ದಳಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ ಅತ್ಯುತ್ತಮ ಪಥಸಂಚಲನ ನಡೆಸಿದ ತಂಡ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಆತ್ಮನಿರ್ಭರ ಭಾರತದ ಅಡಿಯಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಸಿದ್ಧಪಡಿಸಿ ಬಳಕೆ ಮಾಡುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಉದ್ದೇಶದ ತ್ರಿಪುರಾ ಸ್ತಬ್ಧಚಿತ್ರಕ್ಕೆ 2ನೇ ಬಹುಮಾನ ಲಭಿಸಿದೆ. ಆಂಧ್ರಪ್ರದೇಶ ಸರ್ಕಾರವು ಪರಿಸರ ಸ್ನೇಹಿ ಮರದ ಆಟಿಕೆಗಳ ಸ್ತಬ್ಧಚಿತ್ರವನ್ನು ಪ್ರದರ್ಶಿಸಿತ್ತು. ಇದು ಮೂರನೇ ಬಹುಮಾನಕ್ಕೆ ಭಾಜನವಾಗಿದೆ.

ಕೇಂದ್ರ ಸಚಿವಾಲಯ ಹಾಗೂ ಇಲಾಖೆಗಳ ವಿಭಾಗದಲ್ಲಿ ಆದಿವಾಸಿ ಕಲ್ಯಾಣ ಸಚಿವಾಲಯದ ಸ್ತಬ್ಧಚಿತ್ರ ಪ್ರಥಮ ಬಹುಮಾನ ಪಡೆದಿದೆ. ಹಾಗೆಯೇ ಪಥ ಸಂಚಲನದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಹಾಗೂ ದೆಹಲಿ ಪೊಲೀಸ್ ತಂಡವು ಬಹುಮಾನ ಪಡೆದಿವೆ.

ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಸ್ತಬ್ಧಚಿತ್ರಗಳು 76ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು. ಇವುಗಳಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಲು ಮೂವರು ತೀರ್ಪುಗಾರರನ್ನೊಳಗೊಂಡ ತಂಡವನ್ನು ರಕ್ಷಣಾ ಸಚಿವಾಲಯ ರಚಿಸಿತ್ತು. ಇದರೊಂದಿಗೆ ಆನ್‌ಲೈನ್ ಮೂಲಕ ಮತ ಹಾಕಲು ಸಾರ್ವಜನಿಕರಿಗೆ 2 ದಿನಗಳ ಅವಕಾಶ ನೀಡಲಾಗಿತ್ತು. 

ಸಾರ್ವಜನಿಕರ ಮೆಚ್ಚಿನ ಸ್ತಬ್ಧಚಿತ್ರ ವಿಭಾಗದಲ್ಲಿ ಗುಜರಾತ್‌ ಮೊದಲ ಬಹುಮಾನ ಪಡೆದಿದೆ. 2ನೇ ಹಾಗೂ ಮೂರನೇ ಬಹುಮಾನವು ಕ್ರಮವಾಗಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡಕ್ಕೆ ಲಭಿಸಿದೆ. ಸಿಆರ್‌ಪಿಎಫ್‌ಗೆ ಅತ್ಯುತ್ತಮ ಪಥ ಸಂಚಲನ ತಂಡ ಹಾಗೂ ಸಚಿವಾಲಯದ ಸ್ತಬ್ಧಚಿತ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಬಹುಮಾನ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.