ADVERTISEMENT

ಪ್ರಧಾನಿ ಮೋದಿ ಸಲಹೆಗಾರರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಅಮಿತ್‌ ಖರೆ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2021, 13:21 IST
Last Updated 12 ಅಕ್ಟೋಬರ್ 2021, 13:21 IST
 ನಿವೃತ್ತ ಐಎಎಸ್‌ ಅಧಿಕಾರಿ ಅಮಿತ್‌ ಖರೆ
ನಿವೃತ್ತ ಐಎಎಸ್‌ ಅಧಿಕಾರಿ ಅಮಿತ್‌ ಖರೆ    

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಅಮಿತ್‌ ಖರೆ ನೇಮಕಗೊಂಡಿದ್ದಾರೆ. ಕೇಂದ್ರದ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ಅಮಿತ್‌ ಖರೆ, ಸೆಪ್ಟೆಂಬರ್‌ 30ರಂದು ನಿವೃತ್ತರಾದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿ ಅಮಿತ್‌ ಖರೆ ಕಾರ್ಯನಿರ್ವಹಿಸಿದ್ದರು. ಪ್ರಧಾನಿ ಸಲಹೆಗಾರರಾಗಿ ಅಮಿತ್‌ ಖರೆ ಅವರ ನೇಮಕಾತಿಗೆ ಸಂಪುಟದ ನೇಮಕಾತಿಗಳ ಸಮಿತಿಯು ಅನುಮೋದನೆ ನೀಡಿದೆ. 'ಭಾರತ ಸರ್ಕಾರದ ಕಾರ್ಯದರ್ಶಿ ದರ್ಜೆಯ ಸ್ಥಾನಮಾನ ನೀಡಲಾಗುತ್ತದೆ ಹಾಗೂ ಅವರು ಎರಡು ವರ್ಷಗಳ ವರೆಗೂ ಅಥವಾ ಮುಂದಿನ ಆದೇಶದ ವರೆಗೂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ' ಎಂದು ಆದೇಶದಲ್ಲಿ ಉಲ್ಲೇಖಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಲ್ಲಿ ಅಮಿತ್‌ ಖರೆ 'ರಾಷ್ಟ್ರೀಯ ಶಿಕ್ಷಣ ನೀತಿ 2020' ಮುನ್ನಡೆಸಿದ್ದರು. ಡಿಜಿಟಲ್‌ ಮಾಧ್ಯಮ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದ್ದರು.

ADVERTISEMENT

ಸಂಪುಟದ ಮಾಜಿ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಮತ್ತು ಮಾಜಿ ಕಾರ್ಯದರ್ಶಿ ಅಮರ್ಜೀತ್‌ ಸಿನ್ಹಾ ಅವರು ಈ ವರ್ಷ ಪ್ರಧಾನ ಮಂತ್ರಿ ಸಲಹೆಗಾರ ಸ್ಥಾನವನ್ನು ತೊರೆದಿದ್ದಾರೆ. ಪಾರದರ್ಶಕತೆ ಮತ್ತು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಮೂಲಕ ಅಮಿತ್‌ ಖರೆ ಅವರು ಉತ್ತಮ ಐಎಎಸ್‌ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.