ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: 'ಈಶಾನ್ಯ ರಾಜ್ಯಗಳು ಅಭೂತಪೂರ್ವ ಪ್ರಗತಿಯನ್ನು ಕಾಣುತ್ತಿದ್ದು, ಅಭಿವೃದ್ಧಿಗೆ ವೇಗ ನೀಡಲು ಸರ್ಕಾರ ದೃಢಸಂಕಲ್ಪವನ್ನು ಹೊಂದಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಹೇಳಿದ್ದಾರೆ.
ಎರಡು ದಿನಗಳ 'ರೈಸಿಂಗ್ ನಾರ್ತ್ ಈಸ್ಟ್ ಇನ್ವೆಸ್ಟರ್ಸ್ ಸಮ್ಮಿತ್' ಉದ್ಘಾಟಿಸಿ ಮಾತನಾಡಿದ ಅವರು, 'ಈಶಾನ್ಯ ಪ್ರದೇಶಗಳ ವೈವಿಧ್ಯತೆಯು ಅತಿ ದೊಡ್ಡ ಶಕ್ತಿಯಾಗಿದ್ದು, ಬೆಳವಣಿಗೆಯ ದಿಶೆಯಲ್ಲಿ ಮುಂಚೂಣಿಯಲ್ಲಿದೆ' ಎಂದು ಪ್ರತಿಪಾದಿಸಿದ್ದಾರೆ.
ಈ ಹೂಡಿಕೆದಾರರ ಸಮಾವೇಶದಲ್ಲಿ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು, ಅಧಿಕಾರಿಗಳು, ರಾಜತಾಂತ್ರಿಕರು ಹಾಗೂ ಉದ್ಯಮ ಪ್ರಮುಖರು ಭಾಗವಹಿಸಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅಂಬಾನಿ, ಅನಿಲ್ ಅಗರವಾಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
EAST ಅಂದರೆ 'ಸಬಲೀಕರಣ, ಕೆಲಸ ನಿರ್ವಹಣೆ, ಬಲಪಡಿಸುವಿಕೆ, ಪರಿವರ್ತನೆ' (Empower, Act, Strengthen and Transform) ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
'ಒಂದು ಕಾಲದಲ್ಲಿ ಈಶಾನ್ಯವನ್ನು ಕೇವಲ ಗಡಿನಾಡು ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದೆ' ಎಂದು ಹೇಳಿದ್ದಾರೆ.
'ಹಿಂದೆಲ್ಲ ಈಶಾನ್ಯದಲ್ಲಿ ಬಾಂಬ್, ಬಂದೂಕು, ರಾಕೆಟ್‌ಗಳಿಂದಾಗಿ ಯುವಜನತೆ ಅವಕಾಶಗಳಿಂದ ವಂಚಿತಗೊಂಡಿತ್ತು.. ಕಳೆದೊಂದು ದಶಕದಲ್ಲಿ 10 ಸಾವಿರ ಯುವಜನತೆ ಹಿಂಸಾಚಾರವನ್ನು ತ್ಯಜಿಸಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ.
'ಭಯೋತ್ಪಾದನೆ ಅಥವಾ ನಕ್ಸಲಿಸಂ ಆಗಿರಲಿ ನಮ್ಮ ಸರ್ಕಾರವು ಶೂನ್ಯ ಸಹಿಷ್ಣುತೆ ನೀತಿಯನ್ನು ಪಾಲಿಸುತ್ತಿದೆ' ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.
ಈಶಾನ್ಯ ಭಾಗದಲ್ಲೂ ದೇಶೀಯ, ಜಾಗತಿಕ ಹೂಡಿಕೆ ಆಕರ್ಷಿಸಿ ಹೆಚ್ಚಿನ ಅವಕಾಶ ಸೃಷ್ಟಿಸಲು ಹೂಡಿಕೆದಾರರ ಶೃಂಗವನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸೋದ್ಯಮ, ಕೃಷಿ, ಆಹಾರ, ಜವಳಿ, ಕೈಮಗ್ಗ, ಕರಕುಶಲ ವಸ್ತು, ಆರೋಗ್ಯ, ರಕ್ಷಣೆ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಮೂಲಸೌಕರ್ಯ, ಇಂಧನ, ಮನರಂಜನೆ, ಲಾಜಿಸ್ಟಿಕ್, ಕ್ರೀಡೆ ಸೇರಿದಂತೆ ಪ್ರಮುಖ ವಲಯಗಳನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.